ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಹಾಡಿಗಿಂತಲೂ ಪಾಕಿಸ್ತಾನದ ಕಲಾವಿದರ ಕುರಿತು ನೀಡಿದ ಹೇಳಿಕೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಬುಧಾಬಿಯಲ್ಲಿ ನಡೆದ ಲೈವ್ ಕಾನ್ಸರ್ಟ್ ವೇಳೆ ಅರಿಜಿತ್, ಪಾಕಿಸ್ತಾನಿ ಗಾಯಕರುಗಳ ಮೇಲಿನ ನಿರ್ಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
‘ನಾನು ಆತಿಫ್ ಅಸ್ಲಂ ಫ್ಯಾನ್’ ಎಂದ ಅರಿಜಿತ್
ಕಾರ್ಯಕ್ರಮದ ವೇಳೆ ಅರಿಜಿತ್ ಸಿಂಗ್ ‘ಪೆಹಲಿ ನಜರ್ ಮೇ’ ಹಾಡನ್ನು ಹಾಡಿದರು. ಈ ಹಾಡಿನ ಮೂಲ ಗಾಯಕ ಆತಿಫ್ ಅಸ್ಲಂ ಆಗಿದ್ದಾರೆ. ಹಾಡಿನ ಬಳಿಕ ಮಾತನಾಡಿದ ಅರಿಜಿತ್, “ಸಂಗೀತಕ್ಕೆ ಗಡಿ ಇರಬಾರದು. ನಾನು ಆತಿಫ್ ಅಸ್ಲಂ ಮತ್ತು ಶಫ್ಕತ್ ಅಮಾನತ್ ಅಲಿ ಅವರ ದೊಡ್ಡ ಅಭಿಮಾನಿ” ಎಂದು ಹೇಳಿದ್ದಾರೆ. ಜೊತೆಗೆ ಕಲಾವಿದರ ಮೇಲೆ ನಿಷೇಧ ಹೇರೋದು ಸರಿಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಇದನ್ನೂ ಓದಿ:
ವಿಡಿಯೋ ವೈರಲ್, ನೆಟ್ಟಿಗರ ಚರ್ಚೆ ಜೋರು
ಅರಿಜಿತ್ ನೀಡಿದ ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿದೆ. ಕೆಲವರು ಅವರ ನೇರ ಮಾತನ್ನು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಟೀಕಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಈ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಹಿನ್ನೆಲೆ ಗಾಯನಕ್ಕೆ ಗುಡ್‌ಬೈ!
ಇತ್ತೀಚೆಗಷ್ಟೇ ಅರಿಜಿತ್ ಸಿಂಗ್ ಸಿನಿಮಾಗಳ ಹಿನ್ನೆಲೆ ಗಾಯನದಿಂದ ದೂರ ಸರಿಯುವುದಾಗಿ ಘೋಷಿಸಿದ್ದರು. ಆದರೆ ಲೈವ್ ಕಾನ್ಸರ್ಟ್‌ಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅರಿಜಿತ್, ಈಗ ಮತ್ತೆ ತಮ್ಮ ಹೇಳಿಕೆಯ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.



