ಹೊಸ ದಿಗಂತ ವರದಿ,ಮಂಗಳೂರು:
ಕರ್ನಾಟಕದ ಜನಪ್ರಿಯ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಕರ್ನಾಟಕದಲ್ಲಿ ಅಸ್ಥಿರತೆ, ಅರಾಜಕತೆ ,ಅವಿಶ್ವಾಸ ನಿರ್ಮಾಣವಾಗಿದೆ. ಇಂತಹ ಸ್ಥಿತಿ ಬರಬಾರದು ಎಂದರು.
ಸಿದ್ದರಾಮಯ್ಯರಿಗೆ ಅವಮಾನ
ಇದು ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವಾದರೂ ಕೂಡ ಒಬ್ಬ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಗಂಭೀರ ವಿಚಾರ. ಯಾವ ರೀತಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿಯವರು ಅಪಮಾನ ಮಾಡಿದ್ದರೊ ಅದೇ ರೀತಿ ಮಗ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನು ನಡೆಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಬಂದರೂ ಬದಲಾವಣೆಯಾಗಲ್ಲ
ಕಾಂಗ್ರೆಸ್ ಕುರ್ಚಿ ಪೈಟ್ ನಿಂದ ಬಿಜೆಪಿಗೆ ಲಾಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸಕ್ತ ರಾಜ್ಯದಲ್ಲಿ ಇರುವುದು ತುಷ್ಠೀಕರಣ ಹಾಗು ಭ್ರಷ್ಟಚಾರ. ಡಿಕೆಶಿ ಬಂದರೂ ಅದು ಮುಂದುವರೆಯುತ್ತದೆ. ಕಾಂಗ್ರೆಸ್ ವಿಫಲರಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದಿಲ್ಲ. ಮೋದಿಯವರ ಮಾರ್ಗದರ್ಶನದಲ್ಲಿ, ಸಕಾರಾತ್ಮಕ ಚಿಂತನೆಗಳ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದರು.
ಕಾಂಗ್ರೆಸ್ ವಿರುದ್ಧ ಆಕ್ರೋಶ
ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಟೀಕೆಗೆ, ಈ ರೀತಿಯ ಜಾಗತಿಕ ಕ್ರೈಸಿಸ್ ಯಾವತ್ತೂ ಎದುರಾಗಲಿಲ್ಲ. ನನ್ನ ಅನುಭವದ ಆಧಾರದಲ್ಲಿ ಈ ಪ್ರಮಾಣದ ಜಾಗತಿಕ ಬಿಕ್ಕಟ್ಟು ಯಾವಾಗಲು ನಿರ್ಮಾಣ ಆಗಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮನೆಗೆ ಬೆಂಕಿ ಹತ್ತಿದಾಗ ಇದರಲ್ಲಿ ಬೀಡಿ ಹಚ್ಚಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು ಎಂದು ಟೀಕಿಸಿದರು.
ಭಟ್ಕಳದ ಘಟನೆ ಕಾಂಗ್ರೆಸ್ ಆಡಳಿತದ ತುಷ್ಟೀಕರಣದ ಒಂದು ಪರಾಕಾಷ್ಠೆ. ದೇಶ ವಿಭಜನೆಯ ವೇಳೆ ಮುಸ್ಲಿಂ ಲೀಗ್ ವರ್ತಿಸಿದ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಮುಸ್ಲಿಂ ಲೀಗ್ ಭಾಷೆಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ದೇಶವನ್ನ ಇಬ್ಭಾಗ ಮಾಡಲು ಕರೆ ಕೊಟ್ಟ ಪಾರ್ಟಿ ಮುಸ್ಲಿಂ ಲೀಗ್. ಅಂತಹ ಮುಸ್ಲಿಂ ಲೀಗ್ ಜೊತೆ ಕಾಂಗ್ರೆಸ್ ಸಂಬಂಧ ಇಟ್ಟುಕೊಂಡು ಎಲ್ಲಾ ಕಡೆ ಮುಸ್ಲಿಂ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ. ಭಟ್ಕಳದ ಘಟನೆಗೂ ಇದೇ ಕಾರಣ ಎಂದು ಜೋಶಿ ಹೇಳಿದರು.



