May 28, 2026
Thursday, May 28, 2026
spot_img

ನಾನು ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ: ರಾಜ್ಯಸಭೆ ಆಫರ್ ನಿರಾಕರಿಸಿದ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಹೈಕಮಾಂಡ್‌ನ ನಾಯಕರು ನನಗೆ ರಾಜ್ಯಸಭೆಗೆ ಹೋಗುವಂತೆ ಸೂಚಿಸಿದ್ದರು. ಆದರೆ ನಾನು ಅವರ ಆಫರ್ ಅನ್ನು ನಿರಾಕರಿಸಿದ್ದೇನೆ. ನನಗೆ ದೆಹಲಿ ರಾಜಕಾರಣ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಕೊನೆ ಉಸಿರಿರುವವರೆಗೂ ಇಲ್ಲಿಯೇ ಇರುವೆ

ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ ಸ್ವಯಂ ಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಈ ನಾಡಿನ ಜನ ನನ್ನನ್ನು ಐದು ವರ್ಷಗಳ ಕಾಲ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯಲಿದ್ದೇನೆ. ಕೊನೆ ಉಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ಧಾಂತದ ಜೊತೆ ಎಂದಿಗೂ ರಾಜಿ ಇಲ್ಲ

ನನ್ನ ಇಡೀ ಜೀವನದಲ್ಲಿ ನಂಬಿದ ಮೌಲ್ಯಗಳು ಮತ್ತು ಸಿದ್ಧಾಂತದ ಜೊತೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಪ್ರತಿಮನುಷ್ಯನಿಗೂ ಅನ್ನ, ಆರೋಗ್ಯ, ವಸತಿ ಮತ್ತು ಉದ್ಯೋಗ ಸಿಗಬೇಕು ಎಂಬುದೇ ನನ್ನ ಆಶಯ.ನಮ್ಮ ಸರ್ಕಾರ ಬಡವರಿಗೆ ಉಚಿತ ಅನ್ನ, ಗೃಹಲಕ್ಷ್ಮಿ ಮೂಲಕ ಮಹಿಳೆಯರಿಗೆ 2,000 ರೂ., ಗೃಹಜ್ಯೋತಿ ಮೂಲಕ 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಹಾಗೂ ಶಕ್ತಿ ಯೋಜನೆ ಮೂಲಕ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದೆ. ಭೀಕರ ಬರಗಾಲ ಬಂದಾಗಲೂ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಎದುರಿಸಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !