ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ದಾಖಲೆ ಬರೆದಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಬೃಹತ್ ಜಯ ಸಾಧಿಸುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಅದ್ಭುತ ಗೆಲುವಿನೊಂದಿಗೆ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.
ತಂಡದ ಈ ಐತಿಹಾಸಿಕ ಪ್ರದರ್ಶನವನ್ನು ಶ್ಲಾಘಿಸಿ ಆರ್‌ಸಿಬಿ ಫ್ರಾಂಚೈಸಿಯ ಸಂಸ್ಥಾಪಕ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. “ಧರ್ಮಶಾಲಾದಲ್ಲಿ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಸಿಂಹಗಳಿಗೆ ಅಭಿನಂದನೆಗಳು. ಹಾಲಿ ಚಾಂಪಿಯನ್ಸ್ ಆಗಿ ಮತ್ತೊಮ್ಮೆ ಫೈನಲ್ ತಲುಪಿ ಬೆಂಗಳೂರಿನ ಸಿಂಹಗಳಂತೆ ಗರ್ಜಿಸಿದ್ದೀರಿ” ಎಂದು ಮಲ್ಯ ಬರೆದುಕೊಂಡಿದ್ದಾರೆ. ಪ್ರಸ್ತುತ ಈ ಟ್ವೀಟ್ ಅಭಿಮಾನಿಗಳ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
2008 ರಲ್ಲಿ 455 ಕೋಟಿ ರೂ. ನೀಡಿ ಆರ್‌ಸಿಬಿ ತಂಡವನ್ನು ಖರೀದಿಸಿದ್ದ ವಿಜಯ್ ಮಲ್ಯ, 2016ರ ಆರ್ಥಿಕ ಬಿಕ್ಕಟ್ಟಿನ ನಂತರ ಭಾರತ ತೊರೆದು ಸದ್ಯ ಇಂಗ್ಲೆಂಡ್‌ನಲ್ಲಿದ್ದಾರೆ. ತದನಂತರ ಯುನೈಟೆಡ್ ಸ್ಪಿರಿಟ್ಸ್ ಕೈಯಲ್ಲಿದ್ದ ಆರ್‌ಸಿಬಿ ಮಾಲೀಕತ್ವವು, ಪ್ರಸ್ತುತ ಬಿರ್ಲಾ ಒಕ್ಕೂಟದ ಪಾಲಾಗಿದೆ. ಮಾಲೀಕತ್ವ ಬದಲಾಗಿದ್ದರೂ, ತಂಡದ ಮೇಲಿನ ಮಲ್ಯ ಅವರ ಪ್ರೀತಿ ಹಾಗೇ ಉಳಿದಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.



