ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ‘ವಿ ದಿ ಲೀಡರ್ಸ್’ ಚಳವಳಿಯ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೂರು ಬಾರಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಯಾವುದೇ ಹೊಣೆಗಾರಿಕೆ ನಿಗದಿಪಡಿಸದಿರುವುದನ್ನು ಕಟುವಾಗಿ ಟೀಕಿಸಿರುವ ಅವರು, “ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುವವರೆಗೂ ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಏಕಿಷ್ಟು ತಡ ಮಾಡಿತು?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಒತ್ತಡಕ್ಕೆ ಯಾರು ಹೊಣೆ?
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, “ದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುತ್ತದೆ ಎಂಬ ಕಾರಣಕ್ಕೆ ನಾನು ಈ ಹಿಂದೆ ವೈಯಕ್ತಿಕವಾಗಿ ನೀಟ್ ಪರೀಕ್ಷೆಯನ್ನು ಬೆಂಬಲಿಸಿದ್ದೆ. ಆದರೆ, ಕಳೆದ 5 ವರ್ಷಗಳಲ್ಲಿ 3 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಪರೀಕ್ಷಾ ವ್ಯವಸ್ಥೆಯೇ ವಿಫಲವಾಗುತ್ತಿರುವಾಗ, ವಿದ್ಯಾರ್ಥಿಗಳು ಪದೇ ಪದೇ ಪರೀಕ್ಷೆ ಎದುರಿಸಬೇಕಾಗಿ ಬಂದಿದೆ. ಇದರಿಂದ ಅವರ ಮೇಲಾಗುವ ಮಾನಸಿಕ ಒತ್ತಡವನ್ನು ಊಹಿಸಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ತಾರಕಕ್ಕೇರುವವರೆಗೂ ಕಾದಿದ್ದೇಕೆ?
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ ಅವರು, ಪ್ರತಿಭಟನಾಕಾರರೊಂದಿಗೆ ಮುಂಚಿತವಾಗಿಯೇ ಮಾತುಕತೆ ಆರಂಭಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಏನು ತೊಂದರೆಯಾಗಿತ್ತು? ಪರಿಸ್ಥಿತಿ ಕೈಮೀರಿ ಹೋಗುವವರೆಗೂ ಸರ್ಕಾರ ಏನನ್ನು ಕಾಯುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಯುವಜನರು ಕಳೆದುಕೊಂಡರೆ ದೇಶದ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:
ಪಾರದರ್ಶಕತೆಗೆ ಅಣ್ಣಾಮಲೈ ಆಗ್ರಹ
ಕೇಂದ್ರ ಸರ್ಕಾರವು ತಕ್ಷಣವೇ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರೊಂದಿಗೆ ಮುಕ್ತ ಹಾಗೂ ಅರ್ಥಪೂರ್ಣ ಮಾತುಕತೆಯನ್ನು ನಡೆಸಬೇಕು, ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಣ್ಣಾಮಲೈ ಆಗ್ರಹಿಸಿದ್ದಾರೆ.



