July 22, 2026
Wednesday, July 22, 2026
spot_img

ಸಂಸತ್ತಿನಲ್ಲಿ ನಾಲಿಗೆ ಹರಿಬಿಟ್ಟ ಟಿಎಂಸಿ ಸಂಸದ: ಅಧಿವೇಶನದಿಂದ ಉಚ್ಚಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಂಸತ್ತಿನಲ್ಲಿ ಮಹಿಳಾ ಸದಸ್ಯರ ವಿರುದ್ಧ ಅಸಭ್ಯ ಭಾಷೆ ಬಳಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿಯನ್ನು ಮಾನ್ಸೂನ್ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಈ ಅಮಾನತು ನಿರ್ಣಯವನ್ನು ಸದನದಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.

ಅಮಾನತಿಗೆ ಕಾರಣವೇನು?

ವಿಪಕ್ಷಗಳ ತೀವ್ರ ಗದ್ದಲದಿಂದಾಗಿ ಕಲಾಪವು ಮುಂದೂಡಲ್ಪಟ್ಟ ನಂತರ, 69 ವರ್ಷದ ಕಲ್ಯಾಣ್ ಬ್ಯಾನರ್ಜಿ ಮತ್ತು ನ್ಯಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಸದಸ್ಯರ ನಡುವೆ ಲೋಕಸಭೆಯ ಒಳಗೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಟಿಎಂಸಿ ಸಂಸದ ಬ್ಯಾನರ್ಜಿ, ಎನ್‌ಸಿಪಿಐ (NCPI) ಪಕ್ಷದ ಮಹಿಳಾ ಸದಸ್ಯರಾದ ಮಿತಾಲಿ ಬಾಗ್, ಶತಾದ್ರಿ ರಾಯ್ ಮತ್ತು ಕಾಕೋಲಿ ಘೋಷ್ ದಸ್ತಿದಾರ್ ಸೇರಿದಂತೆ ಇತರರ ವಿರುದ್ಧ ಅಸಹ್ಯಕರ ಭಾಷೆಯನ್ನು ಬಳಸಿದ್ದಾರೆ. ಘಟನೆಯ ಬಳಿಕ ಎನ್‌ಸಿಪಿಐ ಸದಸ್ಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದರು.‌

ಇದನ್ನೂ ಓದಿ:

ಸದನದಲ್ಲಿ ನಡೆದ ಕ್ರಮ:

ಮಧ್ಯಾಹ್ನ 2 ಗಂಟೆಗೆ ಕಲಾಪ ಮತ್ತೆ ಆರಂಭವಾದಾಗ, ಪೀಠದಲ್ಲಿದ್ದ ಕೃಷ್ಣ ಪ್ರಸಾದ್ ಟೆನ್ನೇಟಿ, ಸಂಸದರ ವರ್ತನೆ ಸದನದ ಘನತೆಗೆ ಧಕ್ಕೆ ತಂದಿದೆ ಎಂದು ತಿಳಿಸಿದರು. ನಂತರ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಕಲ್ಯಾಣ್ ಬ್ಯಾನರ್ಜಿಯನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದರು. ನೀಟ್ (NEET) ಪೇಪರ್ ಸೋರಿಕೆ ಹಾಗೂ ಇತರೆ ವಿಚಾರಗಳ ಬಗ್ಗೆ ವಿಪಕ್ಷಗಳ ಘೋಷಣೆಗಳ ನಡುವೆಯೇ ಈ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !