ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಪ್ರಮುಖವಾಗಿರುವ ಕಾಮೆಡ್-ಕೆ ಯುಜಿಇಟಿ 2026 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಈ ಬಾರಿ ಮೊದಲ 10 ರ‍್ಯಾಂಕ್‌ಗಳಲ್ಲಿ ಕರ್ನಾಟಕದ ಯಾವುದೇ ವಿದ್ಯಾರ್ಥಿ ಸ್ಥಾನ ಪಡೆಯದಿರುವುದು ವಿಶೇಷವಾಗಿದ್ದು, ಜಾರ್ಖಂಡ್ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ದೇಶಾದ್ಯಂತ ಭಾರಿ ಸ್ಪರ್ಧೆ
ಎಂಜಿನಿಯರಿಂಗ್ ಪ್ರವೇಶಕ್ಕಾಗಿ ದೇಶದ ವಿವಿಧ ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದೀಗ ಫಲಿತಾಂಶ ಹಾಗೂ ರ‍್ಯಾಂಕ್ ಕಾರ್ಡ್‌ಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ
ರಾಜ್ಯದ 3,497 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11,207 ಅಭ್ಯರ್ಥಿಗಳು 90ರಿಂದ 100 ಪರ್ಸೆಂಟೈಲ್ ನಡುವಿನ ಅಂಕಗಳನ್ನು ಪಡೆದಿದ್ದಾರೆ. ಇದರ ಜೊತೆಗೆ ಸಾವಿರಾರು ವಿದ್ಯಾರ್ಥಿಗಳು 70ರಿಂದ 90 ಪರ್ಸೆಂಟೈಲ್ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:
ಟಾಪ್ ರ‍್ಯಾಂಕ್‌ಗಳಲ್ಲಿ ಜಾರ್ಖಂಡ್ ಪ್ರಾಬಲ್ಯ
ಮೊದಲ ರ‍್ಯಾಂಕ್ ಜಾರ್ಖಂಡ್‌ನ ರಾಂಚಿ ಮೂಲದ ದರ್ಶಿಲ್ ಮೋದಿ ಪಾಲಾಗಿದೆ. ಟಾಪ್-6 ಪಟ್ಟಿಯಲ್ಲಿ ಐದು ಸ್ಥಾನಗಳನ್ನು ಜಾರ್ಖಂಡ್ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದು, ಇತರ ರ‍್ಯಾಂಕ್‌ಗಳು ಉತ್ತರಾಖಂಡ, ಆಂಧ್ರಪ್ರದೇಶ, ಛತ್ತೀಸ್‌ಗಢ, ಪಂಜಾಬ್ ಹಾಗೂ ಬಿಹಾರ ವಿದ್ಯಾರ್ಥಿಗಳ ಪಾಲಾಗಿವೆ.
ಆನ್‌ಲೈನ್ ಕೌನ್ಸೆಲಿಂಗ್‌ಗೆ ಸಿದ್ಧತೆ
ಈ ವರ್ಷವೂ ಪ್ರವೇಶ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಮೂಲಕ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಿದ್ದು, ಸೀಟು ಹಂಚಿಕೆ, ಶುಲ್ಕ ಹಾಗೂ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಕಾಮೆಡ್-ಕೆ ತಿಳಿಸಿದೆ.



