May 30, 2026
Saturday, May 30, 2026
spot_img

ಗುತ್ತಿಗೆದಾರರ ಶೋಷಣೆಗೆ ಬ್ರೇಕ್: ಪಂಜಾಬ್‌ನಲ್ಲಿ ಹೊರಗುತ್ತಿಗೆ ಪದ್ಧತಿ ಸಂಪೂರ್ಣ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರ್ಕಾರವು ರಾಜ್ಯದ ಸರ್ಕಾರಿ ನೌಕರರಿಗೆ ಐತಿಹಾಸಿಕ ಕೊಡುಗೆಯೊಂದನ್ನು ನೀಡಿದೆ. ಇಲಾಖೆಗಳಲ್ಲಿ ದಶಕಗಳಿಂದ ಜಾರಿಯಲ್ಲಿದ್ದ ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿ ಪದ್ಧತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಅನುಮೋದನೆ ನೀಡಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 65,048 ನೌಕರರ ಉದ್ಯೋಗ ಕಾಯಂ ಆಗಲಿದ್ದು, ಅವರ ಭವಿಷ್ಯಕ್ಕೆ ಭದ್ರತೆ ಸಿಕ್ಕಂತಾಗಿದೆ.

ಶೋಷಣೆ ಮುಕ್ತಗೊಳಿಸಲು 2 ಹೊಸ ಕಾನೂನು

ಹೊರಗುತ್ತಿಗೆ ನೌಕರರನ್ನು ಗುತ್ತಿಗೆದಾರರ ಶೋಷಣೆಯಿಂದ ಮುಕ್ತಗೊಳಿಸಲು ಸಿಎಂ ಭಗವಂತ್ ಮಾನ್ ಅಧ್ಯಕ್ಷತೆಯ ಕ್ಯಾಬಿನೆಟ್ ಸಭೆಯಲ್ಲಿ ಎರಡು ಮಹತ್ವದ ವಿಧೇಯಕಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ‘ಪಂಜಾಬ್ ರಾಜ್ಯ ಹೊರಗುತ್ತಿಗೆ ಸಿಬ್ಬಂದಿ ವಿಧೇಯಕ 2026’ ಮತ್ತು ‘ಪಂಜಾಬ್ ರಾಜ್ಯ ಗುತ್ತಿಗೆ ಸಿಬ್ಬಂದಿ ವಿಧೇಯಕ 2026’ ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿದ್ದು, ತಕ್ಷಣದ ಜಾರಿಗೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗೆ ರವಾನಿಸಲಾಗಿದೆ.

ಮಧ್ಯವರ್ತಿಗಳ ಹಾವಳಿಗೆ ಬ್ರೇಕ್; ಬ್ಯಾಂಕ್‌ಗೆ ನೇರ ವೇತನ

ಹೊಸ ನಿಯಮದ ಪ್ರಕಾರ, ಕನಿಷ್ಠ 3 ವರ್ಷಗಳ ಸೇವೆ ಪೂರೈಸಿರುವ ಹೊರಗುತ್ತಿಗೆ ನೌಕರರನ್ನು ನೇರವಾಗಿ ಸರ್ಕಾರದ ಒಪ್ಪಂದದ ವ್ಯಾಪ್ತಿಗೆ ತರಲಾಗುತ್ತದೆ. ಇದರಿಂದಾಗಿ ಖಾಸಗಿ ಏಜೆನ್ಸಿಗಳು ಅಥವಾ ಮಧ್ಯವರ್ತಿ ಗುತ್ತಿಗೆದಾರರ ಕಮಿಷನ್ ದಂಧೆಗೆ ಬ್ರೇಕ್ ಬೀಳಲಿದೆ. ಇನ್ನು ಮುಂದೆ ನೌಕರರ ಮಾಸಿಕ ವೇತನಕ್ಕೆ ಯಾವುದೇ ಕಮಿಷನ್ ಕಡಿತವಿಲ್ಲದೆ, ಪೂರ್ಣ ಸಂಬಳ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಒಟ್ಟು 51 ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಇದರ ನೇರ ಲಾಭ ಸಿಗಲಿದೆ.

ಅಪಾಯಕಾರಿ ಉದ್ಯೋಗಿಗಳಿಗೆ ಮೊದಲ ಆದ್ಯತೆ

ನೌಕರರ ಕಾಯಂ ಪ್ರಕ್ರಿಯೆಗಾಗಿ ಸರ್ಕಾರವು ಸಿಬ್ಬಂದಿಯನ್ನು ಅಪಾಯರಹಿತ ಮತ್ತು ಅಪಾಯಕಾರಿ ಎಂದು ಎರಡು ವಿಭಾಗಗಳಾಗಿ ವರ್ಗೀಕರಿಸಿದೆ. ಇದರಲ್ಲಿ ಅಗ್ನಿಶಾಮಕ ಸಿಬ್ಬಂದಿ, ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್‌ಗಳು ಹಾಗೂ ಪೌರಕಾರ್ಮಿಕರಂತಹ ಜೀವದ ಹಂಗು ತೊರೆದು ಕೆಲಸ ಮಾಡುವ ನೌಕರರನ್ನು ಮೊದಲ ಹಂತದಲ್ಲೇ ಆದ್ಯತೆಯ ಮೇರೆಗೆ ಕಾಯಂಗೊಳಿಸಲು ತೀರ್ಮಾನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !