ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ರ ಮಹಾ ಫೈನಲ್ ಕದನಕ್ಕೂ ಮುನ್ನವೇ ಕ್ರಿಕೆಟ್ ಲೋಕದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ಯುವ ರನ್ ಮೆಷಿನ್ ಸಾಯಿ ಸುದರ್ಶನ್ ಹವಾ ಸೃಷ್ಟಿಸಿದ್ದಾರೆ. ತಮ್ಮ ಅಪ್ರತಿಮ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿರುವ ಸುದರ್ಶನ್, ಐಪಿಎಲ್ ಇತಿಹಾಸದಲ್ಲಿ ‘ಕಿಂಗ್’ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅತ್ಯಂತ ಅಪರೂಪದ ಹಾಗೂ ಬೃಹತ್ ರನ್ ದಾಖಲೆಯೊಂದನ್ನು ಸರಿಗಟ್ಟಿ ಧೂಳೆಬ್ಬಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಪ್ರಶಸ್ತಿ ಜಗಳಕ್ಕೂ ಮುನ್ನವೇ ಕೊಹ್ಲಿ ರೆಕಾರ್ಡ್‌ಗೆ ಲಗ್ಗೆ ಇಟ್ಟಿರುವ ಈ ಯುವ ತಾರೆ ನಡೆಸಿರುವ ಐತಿಹಾಸಿಕ ಸಾಧನೆ, ಕ್ರಿಕೆಟ್ ಪಂಡಿತರನ್ನೇ ಬೆರಗುಗೊಳಿಸಿದೆ.
ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಸಾಧನೆ ಸರಿಗಟ್ಟಿದ ಸುದರ್ಶನ್
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 58 ರನ್ ಬಾರಿಸಿದ ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಇನಿಂಗ್ಸ್ ಮೂಲಕ ಅವರು ಐಪಿಎಲ್‌ನಲ್ಲಿ ಸತತ ಎರಡನೇ ಸೀಸನ್‌ನಲ್ಲಿ 700 ಕ್ಕೂ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿದರು. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಕ್ರಿಸ್‌ಗ್ರೇಲ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದು, ಈಗ ಸುದರ್ಶನ್ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಭಾರತೀಯ ಬ್ಯಾಟರ್‌ಗಳ ದಾಖಲೆ ಸಮಾವೇಶ
ಪ್ರಸಕ್ತ ಐಪಿಎಲ್ 2026 ರ ಆವೃತ್ತಿಯಲ್ಲಿ ಸಾಯಿ ಸುದರ್ಶನ್ ಇದುವರೆಗೆ 1 ಶತಕ ಹಾಗೂ 8 ಅರ್ಧಶತಕಗಳನ್ನು ಒಳಗೊಂಡಂತೆ ಒಟ್ಟು 9 ಬಾರಿ 50 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸುದರ್ಶನ್ ಹಂಚಿಕೊಂಡಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾವ ಭಾರತೀಯ ಆಟಗಾರನೂ ಲೀಗ್‌ನ ಒಂದೇ ಆವೃತ್ತಿಯಲ್ಲಿ 8 ಅರ್ಧಶತಕಗಳನ್ನು ಬಾರಿಸಿಲ್ಲ.
ಗಿಲ್-ಸುದರ್ಶನ್ ಅತ್ಯುನ್ನತ ಜೊತೆಯಾಟ
ದಾಖಲೆಗಳು ಇಷ್ಟಕ್ಕೇ ನಿಲ್ಲದೆ, ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿಯು ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ 167 ರನ್‌ಗಳ ಭರ್ಜರಿ ಆರಂಭಿಕ ಜೊತೆಯಾಟ ಪ್ರದರ್ಶಿಸಿತು. ಇದು ಐಪಿಎಲ್ ಪ್ಲೇ-ಆಫ್ಸ್ ಇತಿಹಾಸದಲ್ಲೇ ದಾಖಲಾದ ಅತ್ಯುನ್ನತ ಜೊತೆಯಾಟವಾಗಿದೆ. ಇವರಿಬ್ಬರು ಟಿ20 ಕ್ರಿಕೆಟ್ ಮಾದರಿಯಲ್ಲಿ ಒಟ್ಟಿಗೆ 11ನೇ ಶತಕದ ಜೊತೆಯಾಟವಾಡುವ ಮೂಲಕ ಗೇಲ್-ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್-ಕೊಹ್ಲಿ ಹೆಸರಲ್ಲಿದ್ದ ಸಾರ್ವಕಾಲಿಕ ಟಿ20 ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
‘ಹಿಟ್ ವಿಕೆಟ್’ ಅನ್ವಾಂಟೆಡ್ ರೆಕಾರ್ಡ್
ಐತಿಹಾಸಿಕ ಬ್ಯಾಟಿಂಗ್ ನಡುವೆಯೂ ಸಾಯಿ ಸುದರ್ಶನ್ ಪಂದ್ಯದಲ್ಲಿ ವಿಚಿತ್ರವಾಗಿ ಔಟ್ ಆಗುವ ಮೂಲಕ ಅನ್ವಾಂಟೆಡ್ ರೆಕಾರ್ಡ್ ಒಂದನ್ನು ಬರೆದಿದ್ದಾರೆ. ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಚೆಂಡನ್ನು ತಳ್ಳಲು ಯತ್ನಿಸಿದಾಗ ಬ್ಯಾಟ್ ಕೈಜಾರಿ ನೇರವಾಗಿ ಸ್ಟಂಪ್ಸ್‌ಗೆ ಬಡಿಯಿತು. ಇದು ಸತತ ಎರಡನೇ ಪಂದ್ಯದಲ್ಲಿ ಅವರು ಹಿಟ್ ವಿಕೆಟ್ ಮೂಲಕ ಔಟ್ ಆದ ಪ್ರಸಂಗವಾಗಿದ್ದು, ಟಿ20 ಕ್ರಿಕೆಟ್‌ನಲ್ಲಿ ಒಟ್ಟು ಮೂರು ಬಾರಿ ಈ ರೀತಿ ಔಟ್ ಆದ ಮೊದಲ ಭಾರತೀಯ ಎಂಬ ಬೇಡದ ದಾಖಲೆಯೂ ಇವರ ಹೆಸರಿಗೆ ಸೇರಿದೆ.



