ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮಹಾ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಬಲಿಷ್ಠ ಗುಜರಾತ್ ಟೈಟಾನ್ಸ್ (GT) ಮುಖಾಮುಖಿಯಾಗುತ್ತಿವೆ. ನಾಳೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಉಳಿಸಿಕೊಳ್ಳಲು ಆರ್‌ಸಿಬಿ ಸಜ್ಜಾಗಿದ್ದರೆ, ತವರು ಮೈದಾನದಲ್ಲೇ ಬೆಂಗಳೂರಿಗೆ ಟಕ್ಕರ್ ನೀಡಲು ಜಿಟಿ ಸಜ್ಜಾಗಿದೆ.
ಆರ್‌ಸಿಬಿ ಬ್ಯಾಟಿಂಗ್ ಬಲಕ್ಕೆ ಜಿಟಿ ಬೌಲಿಂಗ್ ಸವಾಲು
ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ತಂಡವನ್ನೇ ಧೂಳೀಪಟ ಮಾಡಿ ನೇರವಾಗಿ ಫೈನಲ್ ತಲುಪಿರುವ ಆರ್‌ಸಿಬಿ ತಂಡವು ಭರ್ಜರಿ ಫಾರ್ಮ್‌ನಲ್ಲಿದೆ. ನಾಯಕ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಬಲ ತಂಡದ ಪ್ರಮುಖ ಆಸ್ತ್ರವಾಗಿದೆ. ಆದರೆ, ತವರು ಮೈದಾನದಲ್ಲಿ ಆಡಲಿರುವ ಗುಜರಾತ್ ಟೈಟಾನ್ಸ್ ತಂಡದ ಕಾಗಿಸೊ ರಬಾಡ ಮತ್ತು ರಶೀದ್ ಖಾನ್ ಘಾತಕ ಬೌಲಿಂಗ್ ಪಡೆಯನ್ನು ಎದುರಿಸುವುದು ಆರ್‌ಸಿಬಿಗೆ ಸುಲಭವಲ್ಲ.
ಕೊಹ್ಲಿ ದಾಖಲೆ ಸರಿಗಟ್ಟಿದ ಸಾಯಿ ಸುದರ್ಶನ್ ಭೀತಿ
ಗುಜರಾತ್ ಟೈಟಾನ್ಸ್ ತಂಡದ ಯುವ ಓಪನರ್ ಸಾಯಿ ಸುದರ್ಶನ್ ಪ್ರಸಕ್ತ ಸೀಸನ್‌ನಲ್ಲಿ ರನ್ ಮಳೆ ಹರಿಸುತ್ತಿದ್ದು, ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿಯು ಪವರ್‌ಪ್ಲೇನಲ್ಲಿ ಆರ್‌ಸಿಬಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಜಾಶ್ ಹೇಜಲ್‌ವುಡ್‌ಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.
ಮಧ್ಯಮ ಕ್ರಮಾಂಕದ ಅಸ್ಥಿರತೆಯೇ ಜಿಟಿ ಮೈನಸ್ ಪಾಯಿಂಟ್
ಗುಜರಾತ್ ತಂಡವು ತನ್ನ ಟಾಪ್-3 ಆಟಗಾರರ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ ಬೌಲರ್‌ಗಳು ಆರಂಭಿಕ ವಿಕೆಟ್ ಕೀಳುವ ಮೂಲಕ ಜಿಟಿಯನ್ನು ಕೇವಲ 162 ರನ್‌ಗಳಿಗೆ ಕಟ್ಟಿಹಾಕಿದ್ದರು. ಇದೇ ತಂತ್ರವನ್ನು ಫೈನಲ್‌ನಲ್ಲೂ ಬಳಸಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಾಸ್ಟರ್ ಪ್ಲಾನ್ ರೂಪಿಸಿದೆ.



