ಪ್ರವಾಸ ಕೈಗೊಳ್ಳುವುದು ಪ್ರತಿಯೊಬ್ಬರಿಗೂ ರೋಮಾಂಚನಕಾರಿ ಅನುಭವ. ಆದರೆ ಪ್ರಯಾಣದ ಸಮಯದಲ್ಲಿ ಮೊಬೈಲ್ ಡೇಟಾ ಖಾಲಿಯಾದಾಗ ಅಥವಾ ನೆಟ್ವರ್ಕ್ ಸಿಗದೇ ಇದ್ದಾಗ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಕೆಫೆ ಅಥವಾ ಹೋಟೆಲ್ಗಳಲ್ಲಿ ಸಿಗುವ ಉಚಿತ ಸಾರ್ವಜನಿಕ ವೈ-ಫೈಗೆ ಕನೆಕ್ಟ್ ಆಗುತ್ತೇವೆ. ಆದರೆ, ಉಚಿತವಾಗಿ ಸಿಗುವ ಈ ವೈ-ಫೈ ಜಾಲಗಳು ಎಷ್ಟು ಅಪಾಯಕಾರಿ ಗೊತ್ತಾ? ಯಾವುದೇ ಪಾಸ್ವರ್ಡ್ ಇಲ್ಲದ ಈ ಮುಕ್ತ ನೆಟ್ವರ್ಕ್ಗಳನ್ನು ಬಳಸಿಕೊಂಡು ಸೈಬರ್ ಹ್ಯಾಕರ್ಗಳು ಫೋನ್ನಲ್ಲಿರುವ ಬ್ಯಾಂಕಿಂಗ್ ಪಾಸ್ವರ್ಡ್ಗಳು, ವೈಯಕ್ತಿಕ ಫೋಟೋಗಳು ಮತ್ತು ಡೇಟಾವನ್ನು ಸುಲಭವಾಗಿ ಕದಿಯಬಹುದು. ಹಾಗಾದರೆ ಪ್ರವಾಸದ ಸಮಯದಲ್ಲಿ ಸಾರ್ವಜನಿಕ ವೈ-ಫೈ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ? ಇಲ್ಲಿದೆ ಪ್ರಮುಖ ಟಿಪ್ಸ್.
ಸಾರ್ವಜನಿಕ ವೈ-ಫೈ ಸುರಕ್ಷಿತವಾಗಿ ಬಳಸುವುದು ಹೇಗೆ?
ವಿಪಿಎನ್ (VPN) ಕಡ್ಡಾಯವಾಗಿ ಬಳಸಬೇಕು:
ಸಾರ್ವಜನಿಕ ವೈ-ಫೈ ಬಳಸುವಾಗ ಸುರಕ್ಷತೆಗೆ ಇರುವ ಅತ್ಯುತ್ತಮ ಮಾರ್ಗ ಎಂದರೆ ವಿಪಿಎನ್ (Virtual Private Network) ಬಳಸುವುದು. ಇದು ಇಂಟರ್ನೆಟ್ ಡೇಟಾವನ್ನು ಎನ್ಕ್ರಿಪ್ಟ್ ಮಾಡುತ್ತದೆ. ಇದರಿಂದ ಹ್ಯಾಕರ್ಗಳು ಆನ್ಲೈನ್ ಚಟುವಟಿಕೆಯನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.
ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಾರದು:
ಉಚಿತ ವೈ-ಫೈ ಕನೆಕ್ಟ್ ಆಗಿದ್ದಾಗ ಯಾವುದೇ ಕಾರಣಕ್ಕೂ ಗೂಗಲ್ ಪೇ, ಫೋನ್ ಪೇ ಅಥವಾ ನೆಟ್ ಬ್ಯಾಂಕಿಂಗ್ ಆಪ್ಗಳನ್ನು ಓಪನ್ ಮಾಡಬಾರದು. ಶಾಪಿಂಗ್ ಮಾಡಲು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಬಾರದು. ಇಂತಹ ಸೂಕ್ಷ್ಮ ಕೆಲಸಗಳಿಗೆ ಮೊಬೈಲ್ ಡೇಟಾವನ್ನೇ ಬಳಸುವುದು ಉತ್ತಮ.
‘Auto-Connect’ ಆಯ್ಕೆಯನ್ನು ಆಫ್ ಮಾಡಬೇಕು:
ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ‘ಆಟೋ ಕನೆಕ್ಟ್ ಟು ವೈ-ಫೈ’ ಯಾವಾಗಲೂ ಆಫ್ ಇಡಬೇಕು. ಇಲ್ಲದಿದ್ದರೆ, ಎಲ್ಲೇ ಹೋದರೂ ಸಿಗುವ ಓಪನ್ ವೈ-ಫೈಗಳಿಗೆ ಫೋನ್ ತಾನಾಗಿಯೇ ಕನೆಕ್ಟ್ ಆಗಿ ಅಪಾಯ ತಂದೊಡ್ಡಬಹುದು.
HTTPS ವೆಬ್ಸೈಟ್ಗಳನ್ನು ಮಾತ್ರ ಭೇಟಿ ಮಾಡಬೇಕು:
ಬ್ರೌಸರ್ನಲ್ಲಿ ಯಾವುದೇ ವೆಬ್ಸೈಟ್ ಓಪನ್ ಮಾಡುವ ಮುನ್ನ ಅದರ ಯುಆರ್ಎಲ್ (URL) ಆರಂಭದಲ್ಲಿ https:// ಇದೆಯೇ ಮತ್ತು ಲಾಕ್ ಚಿಹ್ನೆ ಇದೆಯೇ ಎಂಬುದನ್ನು ಪರಿಶೀಲಿಸಿ. ‘http’ ಇರುವ ವೆಬ್ಸೈಟ್ಗಳು ಸುರಕ್ಷಿತವಲ್ಲ ಮತ್ತು ಅವುಗಳಲ್ಲಿ ಡೇಟಾ ಸೋರಿಕೆಯಾಗುವ ಸಾಧ್ಯತೆ ಹೆಚ್ಚು.
ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (2FA) ಆನ್ ಇರಲಿ:
ಜಿಮೇಲ್, ಸೋಶಿಯಲ್ ಮೀಡಿಯಾ ಮತ್ತು ಬ್ಯಾಂಕಿಂಗ್ ಖಾತೆಗಳಿಗೆ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಸಕ್ರಿಯಗೊಳಿಸಬೇಕು. ಇದರಿಂದ ಹ್ಯಾಕರ್ಸ್ ಪಾಸ್ವರ್ಡ್ ಕದ್ದರೂ ಸಹ, ಮೊಬೈಲ್ಗೆ ಬರುವ ಒಟಿಪಿ (OTP) ಇಲ್ಲದೆ ಖಾತೆಯನ್ನು ಲಾಗಿನ್ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ.



