May 31, 2026
Sunday, May 31, 2026
spot_img

Read It | ಸಾರ್ವಜನಿಕ ವೈ-ಫೈ ಬಳಸ್ತೀರಾ? ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು, ಎಚ್ಚರ!

ಪ್ರವಾಸ ಕೈಗೊಳ್ಳುವುದು ಪ್ರತಿಯೊಬ್ಬರಿಗೂ ರೋಮಾಂಚನಕಾರಿ ಅನುಭವ. ಆದರೆ ಪ್ರಯಾಣದ ಸಮಯದಲ್ಲಿ ಮೊಬೈಲ್ ಡೇಟಾ ಖಾಲಿಯಾದಾಗ ಅಥವಾ ನೆಟ್‌ವರ್ಕ್ ಸಿಗದೇ ಇದ್ದಾಗ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಕೆಫೆ ಅಥವಾ ಹೋಟೆಲ್‌ಗಳಲ್ಲಿ ಸಿಗುವ ಉಚಿತ ಸಾರ್ವಜನಿಕ ವೈ-ಫೈಗೆ ಕನೆಕ್ಟ್ ಆಗುತ್ತೇವೆ. ಆದರೆ, ಉಚಿತವಾಗಿ ಸಿಗುವ ಈ ವೈ-ಫೈ ಜಾಲಗಳು ಎಷ್ಟು ಅಪಾಯಕಾರಿ ಗೊತ್ತಾ? ಯಾವುದೇ ಪಾಸ್‌ವರ್ಡ್ ಇಲ್ಲದ ಈ ಮುಕ್ತ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಸೈಬರ್ ಹ್ಯಾಕರ್‌ಗಳು ಫೋನ್‌ನಲ್ಲಿರುವ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, ವೈಯಕ್ತಿಕ ಫೋಟೋಗಳು ಮತ್ತು ಡೇಟಾವನ್ನು ಸುಲಭವಾಗಿ ಕದಿಯಬಹುದು. ಹಾಗಾದರೆ ಪ್ರವಾಸದ ಸಮಯದಲ್ಲಿ ಸಾರ್ವಜನಿಕ ವೈ-ಫೈ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ? ಇಲ್ಲಿದೆ ಪ್ರಮುಖ ಟಿಪ್ಸ್.

ಸಾರ್ವಜನಿಕ ವೈ-ಫೈ ಸುರಕ್ಷಿತವಾಗಿ ಬಳಸುವುದು ಹೇಗೆ?

ವಿಪಿಎನ್ (VPN) ಕಡ್ಡಾಯವಾಗಿ ಬಳಸಬೇಕು:
ಸಾರ್ವಜನಿಕ ವೈ-ಫೈ ಬಳಸುವಾಗ ಸುರಕ್ಷತೆಗೆ ಇರುವ ಅತ್ಯುತ್ತಮ ಮಾರ್ಗ ಎಂದರೆ ವಿಪಿಎನ್ (Virtual Private Network) ಬಳಸುವುದು. ಇದು ಇಂಟರ್ನೆಟ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ಇದರಿಂದ ಹ್ಯಾಕರ್‌ಗಳು ಆನ್‌ಲೈನ್ ಚಟುವಟಿಕೆಯನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.

ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಾರದು:
ಉಚಿತ ವೈ-ಫೈ ಕನೆಕ್ಟ್ ಆಗಿದ್ದಾಗ ಯಾವುದೇ ಕಾರಣಕ್ಕೂ ಗೂಗಲ್ ಪೇ, ಫೋನ್ ಪೇ ಅಥವಾ ನೆಟ್ ಬ್ಯಾಂಕಿಂಗ್ ಆಪ್‌ಗಳನ್ನು ಓಪನ್ ಮಾಡಬಾರದು. ಶಾಪಿಂಗ್ ಮಾಡಲು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಬಾರದು. ಇಂತಹ ಸೂಕ್ಷ್ಮ ಕೆಲಸಗಳಿಗೆ ಮೊಬೈಲ್ ಡೇಟಾವನ್ನೇ ಬಳಸುವುದು ಉತ್ತಮ.

‘Auto-Connect’ ಆಯ್ಕೆಯನ್ನು ಆಫ್ ಮಾಡಬೇಕು:
ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ‘ಆಟೋ ಕನೆಕ್ಟ್ ಟು ವೈ-ಫೈ’ ಯಾವಾಗಲೂ ಆಫ್ ಇಡಬೇಕು. ಇಲ್ಲದಿದ್ದರೆ, ಎಲ್ಲೇ ಹೋದರೂ ಸಿಗುವ ಓಪನ್ ವೈ-ಫೈಗಳಿಗೆ ಫೋನ್ ತಾನಾಗಿಯೇ ಕನೆಕ್ಟ್ ಆಗಿ ಅಪಾಯ ತಂದೊಡ್ಡಬಹುದು.

HTTPS ವೆಬ್‌ಸೈಟ್‌ಗಳನ್ನು ಮಾತ್ರ ಭೇಟಿ ಮಾಡಬೇಕು:
ಬ್ರೌಸರ್‌ನಲ್ಲಿ ಯಾವುದೇ ವೆಬ್‌ಸೈಟ್ ಓಪನ್ ಮಾಡುವ ಮುನ್ನ ಅದರ ಯುಆರ್‌ಎಲ್ (URL) ಆರಂಭದಲ್ಲಿ https:// ಇದೆಯೇ ಮತ್ತು ಲಾಕ್ ಚಿಹ್ನೆ ಇದೆಯೇ ಎಂಬುದನ್ನು ಪರಿಶೀಲಿಸಿ. ‘http’ ಇರುವ ವೆಬ್‌ಸೈಟ್‌ಗಳು ಸುರಕ್ಷಿತವಲ್ಲ ಮತ್ತು ಅವುಗಳಲ್ಲಿ ಡೇಟಾ ಸೋರಿಕೆಯಾಗುವ ಸಾಧ್ಯತೆ ಹೆಚ್ಚು.

ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (2FA) ಆನ್ ಇರಲಿ:
ಜಿಮೇಲ್, ಸೋಶಿಯಲ್ ಮೀಡಿಯಾ ಮತ್ತು ಬ್ಯಾಂಕಿಂಗ್ ಖಾತೆಗಳಿಗೆ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಸಕ್ರಿಯಗೊಳಿಸಬೇಕು. ಇದರಿಂದ ಹ್ಯಾಕರ್ಸ್ ಪಾಸ್‌ವರ್ಡ್ ಕದ್ದರೂ ಸಹ, ಮೊಬೈಲ್‌ಗೆ ಬರುವ ಒಟಿಪಿ (OTP) ಇಲ್ಲದೆ ಖಾತೆಯನ್ನು ಲಾಗಿನ್ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !