ಹೊಸದಿಗಂತ ಬಳ್ಳಾರಿ:
ಗಣಿನಾಡು ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಸಿಡಿಲು ಹಾಗೂ ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದೆ. ಮುಂಗಾರು ಆರಂಭದ ಮುನ್ಸೂಚನೆಯಂತೆ ಸುರಿದ ಈ ಮಳೆ ಒಂದು ಕಡೆ ಕೃಷಿ ಚಟುವಟಿಕೆಗೆ ಆನೆಬಲ ತಂದಿದ್ದರೆ, ಮತ್ತೊಂದು ಕಡೆ ನಗರ ಪ್ರದೇಶದಲ್ಲಿ ಭಾರೀ ಅವಾಂತರ ಸೃಷ್ಟಿಸಿದೆ.
ರೈತರ ಮೊಗದಲ್ಲಿ ಮಂದಹಾಸ
ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಕಡೆ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಬಿತ್ತನೆ ಕಾರ್ಯಕ್ಕೆ ಭೂಮಿ ಸಿದ್ಧಪಡಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಮಂಗಳವಾರ ಸಂಜೆ ಸುರಿದ ಭಾರಿ ಮಳೆ ಅನ್ನದಾತರಿಗೆ ವರದಾನವಾಗಿ ಪರಿಣಮಿಸಿದೆ. ಈ ಮಳೆಯಿಂದಾಗಿ ಒಣಗುತ್ತಿದ್ದ ಭೂಮಿಗೆ ಜೀವ ಬಂದಂತಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ನಗರದಲ್ಲಿ ಬಿರುಗಾಳಿ ಮಳೆಯ ಅವಾಂತರ, ಜಖಂಗೊಂಡ ವಾಹನಗಳು, ಧಾರಾಕಾರವಾಗಿ ಸುರಿದ ಮಳೆಯ ಜೊತೆಗೆ ಭಾರಿ ಗಾಳಿ ಬೀಸಿದ ಕಾರಣ ನಗರದ ಹಲವು ಬಡಾವಣೆಗಳಲ್ಲಿ ಮರಗಳು ಬುಡಸಮೇತ ರಸ್ತೆಗೆ ಉರುಳಿ ಬಿದ್ದಿವೆ.
ಶಂಕರ ಕಾಲೋನಿ, ಸತ್ಯನಾರಾಯಣ ಪೇಟೆ ಹಾಗೂ ಬಸವೇಶ್ವರ ನಗರದಲ್ಲಿ ಮನೆಗಳ ಮುಂದೆ ಪಾರ್ಕ್ ಮಾಡಲಾಗಿದ್ದ ಕಾರು ಮತ್ತು ಬೈಕ್‌ಗಳ ಮೇಲೆ ಮರಗಳು ಬಿದ್ದ ಪರಿಣಾಮ ವಾಹನಗಳು ಜಖಂಗೊಂಡಿವೆ.
ಹಠಾತ್ ಸಂಭವಿಸಿದ ಈ ಘಟನೆಯಿಂದ ವಾಹನ ಸವಾರರು ಮತ್ತು ಮಾಲೀಕರು ಆತಂಕಕ್ಕೊಳಗಾಗಿದ್ದರು.
ತಕ್ಷಣ ಸ್ಪಂದಿಸಿದ ಪಾಲಿಕೆ ಸದಸ್ಯ: ರಸ್ತೆಗಳಿಗೆ ಮರ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ಕುಮಾರ್ ಮತ್ತು ಅವರ ಬೆಂಬಲಿಗರು ಸ್ಥಳಕ್ಕೆ ಧಾವಿಸಿದರು. ಕಾರ್ಯಕರ್ತರ ಸಹಾಯದಿಂದ ರಸ್ತೆ ಮೇಲಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೊದಲ ದಿನವೇ ಶಾಲಾ ಮಕ್ಕಳಿಗೆ ತೊಂದರೆ
ಮಂಗಳವಾರದಿಂದಲೇ ಶಾಲೆಗಳು ಪುನಾರಂಭಗೊಂಡಿದ್ದು, ಸಂಜೆ ಶಾಲೆ ಬಿಡುವ ಸರಿಯಾದ ಸಮಯಕ್ಕೇ ಮಳೆ ಮುಗಿಬಿದ್ದಿದೆ. ರಸ್ತೆಗಳ ತುಂಬೆಲ್ಲಾ ಚರಂಡಿ ನೀರು ಉಕ್ಕಿ ಹರಿದಿದ್ದರಿಂದ ಶಾಲಾ ಮಕ್ಕಳು ಮನೆಗೆ ಮರಳಲು ತೀವ್ರ ಹರಸಾಹಸ ಪಡಬೇಕಾಯಿತು. ಬಿರುಗಾಳಿ ಸಹಿತ ಮಳೆಯ ಆರ್ಭಟ ಕಂಡು ಪೋಷಕರು ಕೆಲಕಾಲ ಆತಂಕಗೊಂಡಿದ್ದರು. ಕೊನೆಗೆ ಮಕ್ಕಳು ಆಟೋ ಮತ್ತು ಶಾಲಾ ಬಸ್‌ಗಳ ಮೂಲಕ ಸುರಕ್ಷಿತವಾಗಿ ಮನೆ ತಲುಪಿದ ನಂತರ ಪೋಷಕರು ನಿಟ್ಟುಸಿರು ಬಿಟ್ಟರು.



