ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಮತ್ತು ಮಾಜಿ ಕಮಿಷನರ್ ಲಲಿತ್ ಮೋದಿ ಅವರು ಭೂಗತ ಜಗತ್ತಿನ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಐಪಿಎಲ್ ಟೂರ್ನಿಯನ್ನು ತನ್ನ ಹತೋಟಿಗೆ ಪಡೆದು, ಮ್ಯಾಚ್ ಫಿಕ್ಸಿಂಗ್ ಜಾಲವನ್ನು ನಿಯಂತ್ರಿಸಲು ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಭೀಕರ ಸಂಚು ರೂಪಿಸಿದ್ದನು ಎಂದು ಮೋದಿ ಇತ್ತೀಚಿನ ಸಂದರ್ಶನದಲ್ಲಿ ಜಾಗತಿಕ ಕ್ರಿಕೆಟ್ ವಲಯ ಬೆಚ್ಚಿಬೀಳುವಂತಹ ಮಾಹಿತಿ ಹಂಚಿಕೊಂಡಿದ್ದಾರೆ.
ದಾವೂದ್‌ನಿಂದ ನೇರ ಫೋನ್ ಕರೆ ಮತ್ತು ಬೆದರಿಕೆ:
ಲಲಿತ್ ಮೋದಿ ಅವರ ಪ್ರಕಾರ, 2012 ರಲ್ಲಿ ಲಂಡನ್‌ನಲ್ಲಿದ್ದಾಗ ದಾವೂದ್ ಇಬ್ರಾಹಿಂ ನೇರವಾಗಿ ಸ್ಪೀಕರ್ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದನು. ಐಪಿಎಲ್‌ನ ಪ್ರಮುಖ ತಂಡವೊಂದರ ಸಂಪೂರ್ಣ ನಿಯಂತ್ರಣವನ್ನು ತನ್ನ ಗ್ಯಾಂಗ್‌ಗೆ ಬಿಟ್ಟುಕೊಡುವಂತೆ ಆತ ತೀವ್ರ ಒತ್ತಡ ಹೇರಿದ್ದನು. ಐಪಿಎಲ್ ಆರಂಭಿಕ ದಿನಗಳಲ್ಲಿ ದಾವೂದ್ ನಿಯಂತ್ರಿಸುತ್ತಿದ್ದ ಸುಮಾರು 4 ಬಿಲಿಯನ್ ಡಾಲರ್ ಮೌಲ್ಯದ ಭೂಗತ ಬೆಟ್ಟಿಂಗ್ ಮಾರುಕಟ್ಟೆಗೆ ಲಲಿತ್ ಮೋದಿ ತಡೆಯೊಡ್ಡಿದ್ದರು. ಈ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ದಂಧೆಗೆ ಮಣಿಯದ ಕಾರಣಕ್ಕೆ ಇಡೀ ಅಂಡರ್‌ವರ್ಲ್ಡ್ ತಮಗೆ ಶತ್ರುವಾಗಿ ಮಾರ್ಪಟ್ಟಿತ್ತು ಎಂದು ಅವರು ವಿವರಿಸಿದ್ದಾರೆ.
ಲಂಚದ ಆಮಿಷ, ಕೊಲೆ ಯತ್ನ ಮತ್ತು ಮಗನ ಅಪಹರಣ:
ಕ್ರಿಕೆಟ್ ಭ್ರಷ್ಟಾಚಾರಕ್ಕೆ ಸಾಥ್ ನೀಡಲು ತಮಗೆ ನೂರಾರು ಮಿಲಿಯನ್ ಡಾಲರ್ ಲಂಚದ ಆಮಿಷ ಒಡ್ಡಲಾಗಿತ್ತು. ಆದರೆ, ತಾವು ಅದಕ್ಕೆ ಒಪ್ಪದಿದ್ದಾಗ ದಾವೂದ್ ಇಬ್ರಾಹಿಂ ತಮ್ಮನ್ನು ಕೊಲ್ಲಲು ಮೂರು ಬಾರಿ ಸಂಚು ರೂಪಿಸಿದ್ದನು ಹಾಗೂ ತಮ್ಮ ಮಗನನ್ನು ಅಪಹರಿಸಲಾಗಿತ್ತು ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಭಾರತ ತೊರೆಯಲು ಅಸಲಿ ಕಾರಣ:
ತಾವು ಭಾರತ ಬಿಟ್ಟು ಲಂಡನ್‌ನಲ್ಲಿ ನೆಲೆಸಲು ಕೇವಲ ಜಾರಿ ನಿರ್ದೇಶನಾಲಯ (ED) ತನಿಖೆಯಷ್ಟೇ ಕಾರಣವಲ್ಲ. ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲ್‌ನಂತಹ ಪಾತಕಿಗಳಿಂದ ಎದುರಾಗಿದ್ದ ಭೀಕರ ಪ್ರಾಣ ಬೆದರಿಕೆಯೇ ತಾವು ಕ್ರಿಕೆಟ್ ಆಡಳಿತದಿಂದ ಶಾಶ್ವತವಾಗಿ ದೂರ ಉಳಿಯಲು ಪ್ರಮುಖ ಕಾರಣ ಎಂದು ಲಲಿತ್ ಮೋದಿ ಸ್ಪಷ್ಟಪಡಿಸಿದ್ದಾರೆ.



