July 23, 2026
Thursday, July 23, 2026
spot_img

ಫ್ರಾನ್ಸ್‌ನಲ್ಲಿ ತಲ್ಲಣ ಮೂಡಿಸಿದ ಉಷ್ಣಗಾಳಿ: ಜೂನ್ ತಿಂಗಳ ಬಿಸಿಲಿಗೆ 5,700ಕ್ಕೂ ಹೆಚ್ಚು ಜನ ಬ*ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಕಳೆದ ತಿಂಗಳು ಫ್ರಾನ್ಸ್ ದೇಶವನ್ನು ತಲ್ಲಣಗೊಳಿಸಿದ ಐತಿಹಾಸಿಕ ಉಷ್ಣಗಾಳಿಯಿಂದಾಗಿ ಕನಿಷ್ಠ 5,764 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ಇದು ದೇಶದಲ್ಲಿ ದಾಖಲೆಯ ತಾಪಮಾನದಿಂದಾಗಿ ಸಂಭವಿಸಿದ ಭೀಕರ ದುರಂತವಾಗಿದೆ.

ಶೇ. 36 ರಷ್ಟು ಹೆಚ್ಚಾದ ಸಾವಿನ ಪ್ರಮಾಣ

ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜೂನ್ 17 ರಿಂದ ಜುಲೈ 2 ರವರೆಗೆ ಉಷ್ಣಗಾಳಿ ಪೀಡಿತ ಪ್ರದೇಶಗಳಲ್ಲಿ ಒಟ್ಟು 21,674 ಸಾವುಗಳು ಸಂಭವಿಸಿವೆ. ಆದರೆ, ಹಳೆಯ ದತ್ತಾಂಶಗಳ ಆಧಾರದ ಮೇಲೆ ಅದೇ ಅವಧಿಯಲ್ಲಿ ಕೇವಲ 15,910 ಸಾವುಗಳು ನಿರೀಕ್ಷಿತವಾಗಿದ್ದವು. ಈ ಎರಡು ಅಂಕಿ-ಅಂಶಗಳ ನಡುವಿನ ವ್ಯತ್ಯಾಸವೇ ‘ಹೆಚ್ಚುವರಿ ಸಾವುಗಳು’ ಎಂದು ಪರಿಗಣಿಸಲಾಗಿದ್ದು, ಬಿಸಿಲಿನ ತಾಪದಿಂದಾಗಿ ಮರಣ ಪ್ರಮಾಣದಲ್ಲಿ ಶೇಕಡಾ 36 ರಷ್ಟು ಭಾರಿ ಏರಿಕೆ ಕಂಡಿದೆ. ಇದು 15,000 ಜನರನ್ನು ಬಲಿಪಡೆದಿದ್ದ 2003 ರ ಭೀಕರ ಉಷ್ಣಗಾಳಿಯ ನಂತರದ ಅತ್ಯಂತ ಗರಿಷ್ಠ ಮರಣ ಪ್ರಮಾಣವಾಗಿದೆ.

ಜೂನ್ 24, 25 ರಂದು ದಾಖಲೆಯ ತಾಪಮಾನ

ಫ್ರಾನ್ಸ್ ಇತಿಹಾಸದಲ್ಲೇ ಜೂನ್ 24 ಮತ್ತು ಜೂನ್ 25 ಅತ್ಯಂತ ಗರಿಷ್ಠ ತಾಪಮಾನದ ದಿನಗಳಾಗಿ ದಾಖಲಾಗಿವೆ. ದೇಶದ ಸರಾಸರಿ ತಾಪಮಾನವೇ 30 ಡಿಗ್ರಿ ಸೆಲ್ಸಿಯಸ್ ತಲುಪಿದ್ದರೆ, ಹಲವು ನಗರಗಳಲ್ಲಿ ಹಗಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ (104 F) ಅಧಿಕವಾಗಿತ್ತು. ಜೂನ್ 25 ರಿಂದ 27 ರ ನಡುವಿನ ಕೇವಲ ಮೂರು ದಿನಗಳ ಅವಧಿಯಲ್ಲೇ ಅರ್ಧದಷ್ಟು ಸಾವುಗಳು ಸಂಭವಿಸಿವೆ. ಶಾಲೆ ಮತ್ತು ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಈ ಹಠಾತ್ ತಾಪಮಾನ ಏರಿಕೆಯಾಗಿದ್ದರಿಂದ ಜನ ಸಮಾನ್ಯರು ತೀವ್ರ ತೊಂದರೆಗೆ ಸಿಲುಕಿದ್ದರು.

ಇದನ್ನೂ ಓದಿ:

ಶವಾಗಾರಗಳು ಭರ್ತಿ; ಆಸ್ಪತ್ರೆಗಳು ಹೌಸ್‌ಫುಲ್!

ರಾಜಧಾನಿ ಪ್ಯಾರಿಸ್ ಪ್ರಾಂತ್ಯದಲ್ಲೇ ಅತ್ಯಂತ ಹೆಚ್ಚಿನ ಸಾವುಗಳು ಸಂಭವಿಸಿದ್ದು, ಇಲ್ಲಿ ಸುಮಾರು 1,999 ಹೆಚ್ಚುವರಿ ಮರಣಗಳು ವರದಿಯಾಗಿವೆ. ಪ್ಯಾರಿಸ್‌ನ ಶವಾಗಾರಗಳು ಸಂಪೂರ್ಣವಾಗಿ ಭರ್ತಿಯಾಗಿದ್ದರಿಂದ, ಮೃತದೇಹಗಳನ್ನು ಇಡಲು ಜಾಗ ಸಿಗದೆ ಅಂತ್ಯಸಂಸ್ಕಾರದ ನಿರ್ದೇಶಕರು ತೀವ್ರ ಕಷ್ಟ ಅನುಭವಿಸಿದರು. ಮೃತರ ಪೈಕಿ ಅರ್ಧದಷ್ಟು ಜನರು ಆಸ್ಪತ್ರೆಗಳಲ್ಲಿ, ಮೂರನೇ ಒಂದು ಭಾಗದಷ್ಟು ಜನರು ಮನೆಯಲ್ಲಿ ಮತ್ತು ಉಳಿದವರು ಹಿರಿಯ ನಾಗರಿಕರ ಆರೈಕೆ ಕೇಂದ್ರಗಳಲ್ಲಿ ಕೊನೆಯುಸಿರೆಳೆದಿದ್ದಾರೆ.

ತಜ್ಞರ ಪ್ರಕಾರ, ಭೀಕರ ಬಿಸಿಲಿನಿಂದಾಗಿ ಸಂಭವಿಸುವ ಹೃದಯಾಘಾತದಂತಹ ಸಾವುಗಳನ್ನು ನೇರವಾಗಿ ಉಷ್ಣಗಾಳಿಯ ಸಾವು ಎಂದು ದಾಖಲಿಸದ ಕಾರಣ, ನಿಜವಾದ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ. ಯುರೋಪಿನಾದ್ಯಂತ ಈ ವರ್ಷ ಉಷ್ಣಗಾಳಿಗೆ ಒಟ್ಟು 10,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !