June 5, 2026
Friday, June 5, 2026
spot_img

2027ರ ವಿಶ್ವಕಪ್‌ ಆಡಬೇಕಾದ್ರೆ ರೋಹಿತ್-ಕೊಹ್ಲಿ ಇದನ್ನು ಮಾಡಲೇಬೇಕು: ಅಸಲಿಗೆ ಇರ್ಫಾನ್ ಪಠಾಣ್ ಹೇಳಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಭವಿಷ್ಯದ ಕುರಿತು ಭಾರತ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಇಬ್ಬರು ಹಿರಿಯ ಆಟಗಾರರು ಮುಂಬರುವ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಕೇವಲ ಫಿಟ್‌ನೆಸ್ ಒಂದೇ ಸಾಕಾಗುವುದಿಲ್ಲ, ಬದಲಿಗೆ ನಿರಂತರವಾಗಿ ಪಂದ್ಯಗಳನ್ನು ಆಡುವ ಲಯ ಅತ್ಯಗತ್ಯ ಎಂದು ಪಠಾಣ್ ಎಚ್ಚರಿಸಿದ್ದಾರೆ.

ದೀರ್ಘ ಗ್ಯಾಪ್‌ನದ್ದೇ ದೊಡ್ಡ ಸವಾಲು!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕೇವಲ ಏಕದಿನ (ODI) ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಇರ್ಫಾನ್ ಪಠಾಣ್, ಈ ನಿರ್ಧಾರದಿಂದ ಇಬ್ಬರೂ ಎದುರಿಸಲಿರುವ ಅತಿ ದೊಡ್ಡ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.

ಭಾರತ ತಂಡವು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನೇ ಆಡುತ್ತದೆ. ಏಕದಿನ ಪಂದ್ಯಗಳ ಸಂಖ್ಯೆ ತುಂಬಾ ಕಡಿಮೆ ಇರಲಿದೆ. ಅಂತರರಾಷ್ಟ್ರೀಯ ಏಕದಿನ ಪಂದ್ಯಗಳ ನಡುವೆ ಭಾರಿ ದೊಡ್ಡ ಸಮಯದ ಗ್ಯಾಪ್ ಬರುವುದರಿಂದ ಆಟಗಾರರು ತಮ್ಮ ಬ್ಯಾಟಿಂಗ್ ಲಯ ಮತ್ತು ಮ್ಯಾಚ್ ಫಿಟ್‌ನೆಸ್ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ:

“ಅಂತಾರಾಷ್ಟ್ರೀಯ ಪಂದ್ಯಗಳಿಲ್ಲದಾಗ ದೇಶಿ ಕ್ರಿಕೆಟ್ ಆಡಿ”

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್‌ನಲ್ಲಿ ಈ ಇಬ್ಬರೂ ದಿಗ್ಗಜರು ಭಾರತ ತಂಡದ ಪರ ಕಣಕ್ಕಿಳಿಯುವುದನ್ನು ನೋಡಲು ಇಡೀ ಜಗತ್ತು ಕಾಯುತ್ತಿದೆ. ಆದರೆ ಅವರು ಕೇವಲ ಒಂದೇ ಫಾರ್ಮ್ಯಾಟ್‌ನಲ್ಲಿ ಆಡುತ್ತಿರುವುದರಿಂದ, ಅವರು ಎಷ್ಟು ಹೆಚ್ಚು ಪಂದ್ಯಗಳನ್ನು ಆಡುತ್ತಾರೋ ಅಷ್ಟು ಒಳ್ಳೆಯದು. ಭಾರತ ತಂಡಕ್ಕೆ ಒಡಿಐ ಪಂದ್ಯಗಳು ಇಲ್ಲದ ಬಿಡುವಿನ ಅವಧಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಕಡ್ಡಾಯವಾಗಿ ಭಾರತದ ದೇಶಿ ಕ್ರಿಕೆಟ್ ಆಡಬೇಕು. ಅನುಭವವೊಂದೇ ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ರನ್ ಗಳಿಸಲು ಗ್ಯಾರಂಟಿ ನೀಡುವುದಿಲ್ಲ, ಮ್ಯಾಚ್ ಪ್ರಾಕ್ಟೀಸ್ ಅತಿ ಮುಖ್ಯ ಎಂದಿದ್ದಾರೆ.

ಯುವ ಆಟಗಾರರ ಪೈಪೋಟಿ ಮತ್ತು ಬಿಸಿಸಿಐ ಪ್ಲಾನ್

ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕತ್ವವನ್ನು ಶುಭಮನ್ ಗಿಲ್‌ಗೆ ವಹಿಸಲಾಗಿದ್ದು, ತಂಡದಲ್ಲಿ ಯುವ ಆಟಗಾರರ ಪೈಪೋಟಿ ಹೆಚ್ಚಾಗಿದೆ. ಬಿಸಿಸಿಐ ಆಯ್ಕೆ ಸಮಿತಿಯು ಸಹ 2027ರ ವಿಶ್ವಕಪ್‌ ದೃಷ್ಟಿಯಿಂದ ಕೊಹ್ಲಿ ಮತ್ತು ರೋಹಿತ್ ಪ್ರದರ್ಶನ ಹಾಗೂ ಫಿಟ್‌ನೆಸ್ ಅನ್ನು ಪ್ರತಿ ಸರಣಿಯಲ್ಲೂ ಸೂಕ್ಷ್ಮವಾಗಿ ಗಮನಿಸಲು ನಿರ್ಧರಿಸಿದೆ. ಆದಾಗ್ಯೂ, ಇತ್ತೀಚಿನ ಸರಣಿಗಳಲ್ಲಿ ಇಬ್ಬರೂ ಬ್ಯಾಟರ್‌ಗಳು ಶತಕಗಳನ್ನು ಸಿಡಿಸಿ ತಾವಿನ್ನೂ ‘ಬಾಕ್ಸ್ ಆಫೀಸ್’ ಆಟಗಾರರು ಎಂಬುದನ್ನು ಸಾಬೀತುಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !