ಅನಾನಸ್ ಮೆಣಸ್ಕಾಯಿ ದಕ್ಷಿಣ ಕನ್ನಡ, ಉಡುಪಿ ಮತ್ತು ಮಂಗಳೂರು ಭಾಗದ ಅತ್ಯಂತ ಪ್ರಸಿದ್ಧ ಹಾಗೂ ಸಾಂಪ್ರದಾಯಿಕ ಅಡುಗೆಯಾಗಿದೆ. ಕರಾವಳಿ ಭಾಗದ ಮದುವೆ ಮನೆಗಳ ಔತಣಕೂಟದಲ್ಲಿ ಈ ಖಾದ್ಯಕ್ಕೆ ವಿಶೇಷವಾದ ಸ್ಥಾನವಿದೆ. ಅನಾನಸ್ ಹಣ್ಣಿನ ನೈಸರ್ಗಿಕ ಹುಳಿ-ಸಿಹಿಯೊಂದಿಗೆ, ಹುರಿದ ಎಳ್ಳು, ಒಣಮೆಣಸಿನಕಾಯಿ ಮತ್ತು ಮಸಾಲೆಗಳ ಖಾರ ಸೇರಿ ತಯಾರಾಗುವ ಈ ಗ್ರೇವಿ, ಬಿಸಿ ಬಿಸಿ ಅನ್ನದೊಂದಿಗೆ ನೆಂಚಿಕೊಳ್ಳಲು ಅಥವಾ ರೊಟ್ಟಿ, ಚಪಾತಿಯೊಂದಿಗೆ ಸವಿಯಲು ಇದು ಅತ್ಯುತ್ತಮ ಕಾಂಬಿನೇಷನ್ ಆಗಿದೆ.
ಬೇಕಾಗುವ ಸಾಮಗ್ರಿಗಳು
ಅನಾನಸ್ (ಪೈನಾಪಲ್):
ಬೆಲ್ಲ
ಹುಣಸೆಹಣ್ಣಿನ ರಸ
ಅರಿಶಿನ ಪುಡಿ
ಉಪ್ಪು
ಹಸಿ ತೆಂಗಿನಕಾಯಿ ತುರಿ
ಬಿಳಿ ಅಥವಾ ಕಪ್ಪು ಎಳ್ಳು
ಉದ್ದಿನಬೇಳೆ
ಕಡಲೆಬೇಳೆ
ಕೊತ್ತಂಬರಿ ಬೀಜ
ಮೆಂತೆ ಕಾಳು
ಬ್ಯಾಡಗಿ ಒಣಮೆಣಸಿನಕಾಯಿ
ತೆಂಗಿನ ಎಣ್ಣೆ
ಸಾಸಿವೆ
ಕರಿಬೇವು
ಇಂಗು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಹೆಚ್ಚಿದ ಅನಾನಸ್ ತುಂಡುಗಳು, ಅರಿಶಿನ ಪುಡಿ, ಉಪ್ಪು, ಬೆಲ್ಲ ಮತ್ತು 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆ ತುಂಡುಗಳು ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ನಂತರ ಒಂದು ಸಣ್ಣ ಬಾಣಲೆಯಲ್ಲಿ ಎಳ್ಳನ್ನು ಹಾಕಿ ಅದು ಚಟಪಟ ಅಂತ ಸಿಡಿಯುವವರೆಗೆ ಡ್ರೈ ರೋಸ್ಟ್ ಮಾಡಿ ಪ್ರತ್ಯೇಕವಾಗಿ ಎತ್ತಿಡಬೇಕು. ಬಳಿಕ ಅದೇ ಬಾಣಲೆಗೆ 1 ಚಮಚ ತೆಂಗಿನ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ ಬೀಜ ಮತ್ತು ಮೆಂತೆ ಕಾಳುಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಒಣಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ 1 ನಿಮಿಷ ಹುರಿದು, ಈ ಹುರಿದ ಪದಾರ್ಥಗಳು ತಣ್ಣಗಾದ ನಂತರ, ಇವುಗಳೊಂದಿಗೆ ತೆಂಗಿನಕಾಯಿ ತುರಿ, ಹುರಿದ ಎಳ್ಳು ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನಯವಾದ ಪೇಸ್ಟ್ ಮಾಡಿಕೊಳ್ಳಬೇಕು.
ಅನಾನಸ್ ಬೆಂದ ನಂತರ, ಅದಕ್ಕೆ ಹುಣಸೆಹಣ್ಣಿನ ರಸ ಮತ್ತು ಸಿದ್ಧಪಡಿಸಿದ ಮಸಾಲಾ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಗಟ್ಟಿ ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಸೇರಿಸಿ, ಉಪ್ಪು-ಸಿಹಿಯನ್ನು ಒಮ್ಮೆ ಟೇಸ್ಟ್ ಮಾಡಿ ಹೊಂದಿಸಿಕೊಳ್ಳಬೇಕು. ಮಸಾಲಾದ ಹಸಿ ವಾಸನೆ ಹೋಗಿ, ಗ್ರೇವಿ ಸ್ವಲ್ಪ ದಪ್ಪಗಾಗುವವರೆಗೆ 5-7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಒಗ್ಗರಣೆ ಸೌಟಿನಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ ಸಾಸಿವೆ, ಒಣಮೆಣಸಿನಕಾಯಿ, ಇಂಗು ಮತ್ತು ಕರಿಬೇವು ಹಾಕಿ ಸೀಸನಿಂಗ್ ಮಾಡಿ. ಈ ಬಿಸಿ ಒಗ್ಗರಣೆಯನ್ನು ಕುದಿಯುತ್ತಿರುವ ಮೆಣಸ್ಕಾಯಿಗೆ ಸೇರಿಸಿ ತಕ್ಷಣ ಮುಚ್ಚಳ ಮುಚ್ಚಿದರೆ ಬಿಸಿ ಬಿಸಿಯಾದ ಅನಾನಸ್ ಮೆಣಸ್ಕಾಯಿ ಸಿದ್ದವಾಗುತ್ತದೆ.



