ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಗಳು ಮರುಪ್ರಾರಂಭಗೊಂಡ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲಾ ಪೊಲೀಸರು ಸೋಮವಾರ ಜಿಲ್ಲಾದ್ಯಂತ ಶಾಲಾ ಸಾರಿಗೆ ವಾಹನಗಳ ವಿರುದ್ಧ ಭಾರಿ ಕಾರ್ಯಾಚರಣೆ ನಡೆಸಿದ್ದು, ಅನಿರೀಕ್ಷಿತ ತಪಾಸಣೆ ಕೈಗೊಂಡಿದ್ದರು.
ಶಾಲಾ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂಬುದನ್ನು ತಪಾಸಣೆ ಮಾಡಲಾಯಿತು.
ಈ ವ್ಯಾಪಕ ಕಾರ್ಯಾಚರಣೆಯ ಸಂದರ್ಭದಲ್ಲಿ, ಜಿಲ್ಲಾ ಪೊಲೀಸರು ಒಟ್ಟು 457 ಶಾಲಾ ವಾಹನ ಚಾಲಕರನ್ನು ಬ್ರೀತ್‌ಅನಲೈಸರ್/ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆಗೆ ಒಳಪಡಿಸಿದರು. ಇವರಲ್ಲಿ ಏಳು ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂದು ಶಿವಮೊಗ್ಗ ಎಸ್ಪಿ ಬಿ. ನಿಖಿಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗಿದೆ. ತಪ್ಪು ಮಾಡಿದ ಎಲ್ಲಾ ಚಾಲಕರ ವಿರುದ್ಧ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿದ್ದು, ಜತೆಗೆ ಅವರ ಚಾಲನಾ ಪರವಾನಗಿಯನ್ನು (ಡಿಎಲ್) ಶಾಶ್ವತವಾಗಿ ರದ್ದುಗೊಳಿಸುವಂತೆ ಶಿಫಾರಸು ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ವರದಿ ಸಲ್ಲಿಸಲಾಗಿದೆ ಎಂದು ಐಪಿಎಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ನಡೆದ ಈ ಕಾರ್ಯಾಚರಣೆಯ ಭಾಗವಾಗಿ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಪ್ರಮುಖ ಜಂಕ್ಷನ್‌ಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಶಾಲಾ ಬಸ್ ಹಾಗೂ ವ್ಯಾನ್‌ಗಳನ್ನು ತಡೆದು ತಪಾಸಣೆ ನಡೆಸಿದರು. ಈ ತಪಾಸಣೆಗಳ ಜತೆಗೆ, ಅಧಿಕಾರಿಗಳು ವಾಹನಗಳ ಫಿಟ್‌ನೆಸ್ ನಿಯತಾಂಕಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯವಾಗಿ ಮಾನ್ಯತೆ ಇರುವ ವಾಹನ ವಿಮೆ, ವಾಯು ಮಾಲಿನ್ಯ ಪ್ರಮಾಣಪತ್ರ ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಹೊಂದುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಚಾಲಕರಿಗೆ ಸೂಚನೆ ನೀಡಿದ್ದಾರೆ.



