ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪ್ರಸಿದ್ಧ ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಭಕ್ತರ ಮೇಲೆ ಅಲ್ಲಿನ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಘಟನೆಯಿಂದ ನೊಂದ ಕನ್ನಡಿಗರು, ದೇವಸ್ಥಾನದ ಕಳಪೆ ನಿರ್ವಹಣೆ ಹಾಗೂ ಭಕ್ತರೊಂದಿಗೆ ನಡೆಸಿಕೊಳ್ಳುವ ರೀತಿಗೆ ತೀವ್ರ ಆಕ್ರೋಶ ಹೊರಹಾಕಿದ್ದು, ಯಾರೂ ಈ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದರು. ಇದರ ಬೆನ್ನಲ್ಲೇ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿರುವ ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ, ಭದ್ರತೆಯ ಕುರಿತು ಮಾಹಿತಿ ನೀಡಿ ಅಪ್ಪಟ ಕನ್ನಡದಲ್ಲೇ ಮಾತನಾಡುವ ಮೂಲಕ ಕರ್ನಾಟಕದ ಭಕ್ತರನ್ನು ಸ್ವಾಗತಿಸಿದ್ದಾರೆ.
ಕನ್ನಡದಲ್ಲೇ ಸಂದೇಶ ನೀಡಿದ ಕೇರಳ ಡಿಐಜಿ
ಕರ್ನಾಟಕದ ಭಕ್ತರಿಗಾಗಿ ಕೇರಳ ರೇಂಜ್ ಡಿಐಜಿ ಯತೀಶ್ ಚಂದ್ರ ಕನ್ನಡದಲ್ಲಿಯೇ ಮಾತನಾಡಿರುವ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕನ್ನಡಿಗರನ್ನು ಆಪ್ತವಾಗಿ ಉದ್ದೇಶಿಸಿ ಮಾತನಾಡಿರುವ ಅವರು, ಕೊಟ್ಟಿಯೂರು ದೇವಸ್ಥಾನದ ಮಂಡಳಿ ಹಾಗೂ ಸ್ಥಳೀಯ ಪಂಚಾಯತ್‌ನವರು ವೈಶಾಖ ಮಹೋತ್ಸವಕ್ಕೆ ಬಹಳ ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಭಕ್ತಾದಿಗಳಿಗೆ ಹೆಚ್ಚಿನ ಮೂಲಸೌಕರ್ಯ ಹಾಗೂ ವ್ಯವಸ್ಥಿತ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ.
ಕನ್ನಡಿಗರಿಗಾಗಿ ವಿಶೇಷ ವ್ಯವಸ್ಥೆ
ಕರ್ನಾಟಕದಿಂದ ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ದೇವಸ್ಥಾನದ ಆವರಣದಲ್ಲಿ ಕನ್ನಡದಲ್ಲಿಯೇ ನಾಮಫಲಕಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಗೊಂದಲಗಳನ್ನು ನಿವಾರಿಸಲು ಕನ್ನಡದಲ್ಲಿಯೇ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಡಿಐಜಿ ಮಾಹಿತಿ ನೀಡಿದ್ದಾರೆ.
ಪರಿಸರ ರಕ್ಷಣೆಗೆ ಕನ್ನಡಿಗರಲ್ಲಿ ಮನವಿ
ಪವಿತ್ರವಾದ ಈ ಕಾಡಿನ ಸನ್ನಿಧಿಗೆ ಬರುವಾಗ ಪ್ರಕೃತಿಯನ್ನು ಗೌರವಿಸುವಂತೆ ವಿನಂತಿಸಿರುವ ಅವರು, ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಂತೆ ಕೋರಿದ್ದಾರೆ. ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಹಕರಿಸುವಂತೆ ಅತ್ಯಂತ ಆಪ್ತವಾಗಿ ವಿನಂತಿಸಿಕೊಂಡಿದ್ದಾರೆ.
ಭಕ್ತರು ಯಾವುದೇ ಆತಂಕವಿಲ್ಲದೆ ಕ್ಯೂನಲ್ಲಿ ಆರಾಮಾಗಿ ಬಂದು ದೇವರ ದರ್ಶನ ಪಡೆಯಬಹುದು. ಪೊಲೀಸರು ಭದ್ರತೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ತಾವೆಲ್ಲರೂ ಇಲ್ಲಿಗೆ ಬಂದು ದರ್ಶನ ಮಾಡಿ, 26 ದಿನಗಳ ಕಾಲ ನಡೆಯುವ ಈ ಐತಿಹಾಸಿಕ ವೈಶಾಖ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ಮನವಿ ಮಾಡುವ ಮೂಲಕ ಕನ್ನಡಿಗರ ಅಸಮಾಧಾನವನ್ನು ಶಮನಗೊಳಿಸಲು ಪ್ರಯತ್ನಿಸಿದ್ದಾರೆ.



