June 11, 2026
Thursday, June 11, 2026
spot_img

ವಿಎಸ್‌ಕೆ ವಿವಿಯಲ್ಲಿ ‘ಹಣ ಕೊಟ್ಟರೆ ಪಾಸ್’ ಆರೋಪ: ABVPಯಿಂದ ಪ್ರತಿಭಟನೆ

ಹೊಸದಿಗಂತ ವರದಿ ಬಳ್ಳಾರಿ:

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಣ ಪಡೆದು ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿದ್ದು, ಇದು ಅತ್ಯಂತ ಖಂಡನೀಯ. ಇದರಿಂದ ಅರ್ಹ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗಲಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಇಂತಹ ಪ್ರಕರಣಗಳಿಗೆ ವಿಸಿ ಅವರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಇಲ್ಲಿನ ಎಬಿವಿಪಿ ಕಾರ್ಯಕರ್ತರು ವಿಎಸ್ ಕೆ ವಿವಿ ಎದುರು ಪ್ರತಿಭಟನೆ ನಡೆಸಿದರು.

ವಿಎಸ್ ಕೆ ವಿವಿಯಲ್ಲಿ ಅನರ್ಹರಿದ್ದರೂ ಹಣ ನೀಡಿದರೆ ಉತ್ತೀರ್ಣ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ವಿವಿಯ ಕುಲಪತಿಗಳಿಗೆ ಸಾಕಷ್ಟು ಬಾರಿ ಗಮನಸೆಳೆದರೂ ಕ್ರಮವಿಲ್ಲ, ವಿವಿಯ ಸಿಬ್ಬಂದಿಗಳು, ಅಧಿಕಾರಿಗಳು ನೇರವಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ಉತ್ತೀರ್ಣ ಮಾಡಿದ ಉದಾಹರಣೆಗಳಿವೆ.

ಇದನ್ನೂ ಓದಿ:

ಈ ಕುರಿತು ಹಣದ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮಾತನಾಡಿದ ಸಂಭಾಷಣೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿವೆ. ಈ ಕುರಿತು ವಿವಿ ಎದುರು ಪ್ರತಿಭಟನೆ ನಡೆಸಿ, ವಿಸಿ ಅವರ ಗಮನಸೆಳೆದರೆ, ಹಾರಿಕೆ ಉತ್ತರ ನೀಡುತ್ತಿರುವುದು ಬಹುದೊಡ್ಡ ದುರಂತ. ಹಣ ನೀಡಿ ವಿದ್ಯಾರ್ಥಿಗಳು ಪಾಸಾದರೆ, ಪ್ರತಿಭಾವಂತ ವಿದ್ಯಾರ್ಥಿಗಳ ಗತಿ ಏನು, ಈ ಬೆಳವಣಿಗೆ ಸರಿಯಲ್ಲ, ಇದರಿಂದ ವಿವಿಯ ಘನತೆ ಹಾಳಾಗಲಿದೆ. ಕೂಡಲೇ ಈ ಅಕ್ರಮದಲ್ಲಿ ಭಾಗಿಯಾದವರು ಯಾರೇ ಇರಲಿ, ಕೂಡಲೇ ಅಮಾನತ್ತುಗೊಳಿಸಬೇಕು, ಇಂತಹ ಪ್ರಕರಣಗಳಿಗೆ ವಿಸಿ ಅವರು ಕಡಿವಾಣ ಹಾಕಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ವಿವಿಧ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !