June 11, 2026
Thursday, June 11, 2026
spot_img

ಇ. ಶ್ರೀಧರನ್ ಪ್ರಸ್ತಾಪದ ಹೈಸ್ಪೀಡ್ ರೈಲು ಸದ್ಯಕ್ಕಿಲ್ಲ ಜಾರಿ, ಅಧ್ಯಯನಕ್ಕೆ ತಜ್ಞರ ಸಮಿತಿ: ಕೇರಳ ಸಿಎಂ ಸತೀಶನ್ ಸ್ಪಷ್ಟೋಕ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಇ. ಶ್ರೀಧರನ್ ಪ್ರಸ್ತಾಪಿಸಿರುವ ಹೈಸ್ಪೀಡ್ ರೈಲು ಯೋಜನೆಯನ್ನು ಜಾರಿಗೆ ತರುವ ಕುರಿತು ರಾಜ್ಯ ಸರ್ಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.


ಯೋಜನೆಯ ಎಲ್ಲ ಆಯಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ನೇಮಿಸಲಾಗಿದ್ದು, ಅದರ ವರದಿ ಬಂದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ಯೋಜನೆಯ ತಾಂತ್ರಿಕ, ಆರ್ಥಿಕ ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ಸರ್ಕಾರ ಬಯಸಿದೆ ಎಂದು ತಿಳಿಸಿದರು.


ಇದೇ ವೇಳೆ, ಇ. ಶ್ರೀಧರನ್ ಅವರ ಹೈಸ್ಪೀಡ್ ರೈಲು ಯೋಜನೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ನಾಲ್ವರು ಸದಸ್ಯರ ತಜ್ಞರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಸಾರಿಗೆ ಕಾರ್ಯದರ್ಶಿ ಹಾಗೂ ರೈಲ್ವೆ ವಲಯ ತಜ್ಞ ಜೆ. ವಿನಯನ್ ಸಮಿತಿಯ ನೇತೃತ್ವ ವಹಿಸಲಿದ್ದು, ಹಣಕಾಸು ತಜ್ಞ ಡಾ. ಸಿ. ವೀರಮಣಿ ಮತ್ತು ಪರಿಸರವಾದಿ ಶ್ರೀಧರ್ ರಾಧಾಕೃಷ್ಣನ್ ಸೇರಿದಂತೆ ಇತರರು ಸದಸ್ಯರಾಗಿದ್ದಾರೆ.


ಯೋಜನೆಯಿಂದ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸದೆ ಅದನ್ನು ಜಾರಿಗೊಳಿಸಬಾರದು ಎಂದು ವಿವಿಧ ಪರಿಸರ ಸಂಘಟನೆಗಳು ಹಾಗೂ ಕೆ-ರೈಲ್ ವಿರೋಧಿ ಸಮಿತಿಗಳು ಆಗ್ರಹಿಸಿವೆ. ಪರಿಸರವಾದಿ ಶ್ರೀಧರ್ ರಾಧಾಕೃಷ್ಣನ್ ಅವರು ಈ ಹಿಂದೆ ಕೆ-ರೈಲ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದವರಾಗಿದ್ದಾರೆ.


ಇ. ಶ್ರೀಧರನ್ ಅವರೊಂದಿಗೆ ನಡೆದ ಸಭೆಯಲ್ಲಿ ಯೋಜನೆ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಇದೀಗ ತಜ್ಞರ ಸಮಿತಿಯ ಅಧ್ಯಯನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !