ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಧ್ಯರೇಖೆಯ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಭಾರತದಲ್ಲಿ ಈ ವರ್ಷ ತೀವ್ರ ಬೇಸಿಗೆ ಮತ್ತು ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಏಷ್ಯಾದ ಬಹುತೇಕ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಳ ಮತ್ತು ಶುಷ್ಕ ಹವಾಮಾನ ಪರಿಸ್ಥಿತಿ ಉಂಟಾಗುವ ಸಾಧ್ಯತೆಯನ್ನೂ ತಜ್ಞರು ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ, ಎಲ್ ನಿನೊ ಪರಿಸ್ಥಿತಿ ಆರಂಭವಾಗಿರುವ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಎಲ್ ನಿನೊ ವಿದ್ಯಮಾನಕ್ಕೆ ಸಂಬಂಧಿಸಿದ ಸಾಗರ ಮತ್ತು ವಾತಾವರಣದ ಬದಲಾವಣೆಗಳು ಈಗಾಗಲೇ ಪೆಸಿಫಿಕ್ ಮಹಾಸಾಗರದ ಭೂಮಧ್ಯರೇಖೆಯ ಪ್ರದೇಶದಲ್ಲಿ ಕಂಡುಬಂದಿದ್ದು, ಎಲ್ ನಿನೊ ರೂಪುಗೊಳ್ಳುತ್ತಿರುವ ಸೂಚನೆಗಳು ಸ್ಪಷ್ಟವಾಗಿವೆ.
ಸಾಮಾನ್ಯವಾಗಿ ಎಲ್ ನಿನೊ ವಿದ್ಯಮಾನವು ಭಾರತದಲ್ಲಿ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಲು ಮತ್ತು ಬೇಸಿಗೆ ಅವಧಿಯಲ್ಲಿ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಈ ವರ್ಷದ ಒಟ್ಟಾರೆ ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿಯ ಶೇ.90ರಷ್ಟೇ ಇರಬಹುದು ಎಂದು ಅಂದಾಜಿಸಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ನೀಡಿದ್ದ ಮುನ್ಸೂಚನೆಯಲ್ಲಿ ಶೇ.92ರಷ್ಟು ಮಳೆಯಾಗಲಿದೆ ಎಂದು ತಿಳಿಸಿತ್ತು.
ಭಾರತದ ಕೃಷಿ ಮತ್ತು ಆರ್ಥಿಕತೆಯ ದೃಷ್ಟಿಯಿಂದ ನೈಋತ್ಯ ಮುಂಗಾರು ಅತ್ಯಂತ ಮಹತ್ವದ್ದಾಗಿದೆ. ದೇಶದ ಒಟ್ಟು ಕೃಷಿಭೂಮಿಯ ಬಹುಪಾಲು ಮಳೆಯನ್ನೇ ಅವಲಂಬಿಸಿದ್ದು, ಮುಂಗಾರು ದುರ್ಬಲವಾದರೆ ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜೊತೆಗೆ, ಕುಡಿಯುವ ನೀರು, ಕೈಗಾರಿಕೆಗಳು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹಣೆಯ ಮೇಲೂ ಇದರ ಪರಿಣಾಮ ಬೀರಬಹುದು. ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಬೆಳವಣಿಗೆಗಳಿಂದ ರಸಗೊಬ್ಬರ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳ ನಡುವೆಯೇ ಎಲ್ ನಿನೊ ಪರಿಣಾಮವೂ ಸೇರಿಕೊಂಡರೆ ಕೃಷಿ ವಲಯಕ್ಕೆ ಮತ್ತಷ್ಟು ಸವಾಲು ಎದುರಾಗಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ಪರಿಸ್ಥಿತಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಇದನ್ನು ಜಾಗತಿಕ ಹವಾಮಾನ ಎಚ್ಚರಿಕೆಯಾಗಿ ಪರಿಗಣಿಸಬೇಕಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.



