ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಬಹುನಿರೀಕ್ಷಿತ ಸೂಪರ್‌ಹೀರೋ ಚಿತ್ರ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತೀಯ ಪ್ರೇಕ್ಷಕರಿಗಾಗಿ ವಿಶೇಷ ಉಡುಗೊರೆಯೊಂದನ್ನು ಹೊತ್ತು ತಂದಿದೆ. ಜಾಗತಿಕವಾಗಿ ಬಿಡುಗಡೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿಯೇ, ಅಂದರೆ ಜುಲೈ 30 ರಂದು ಈ ಸಿನಿಮಾ ಭಾರತದಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ ಎಂದು ಸೋನಿ ಪಿಕ್ಚರ್ಸ್ ಅಧಿಕೃತವಾಗಿ ಪ್ರಕಟಿಸಿದೆ.
ವಿಶ್ವದಾದ್ಯಂತ ಜುಲೈ 31, ಭಾರತದಲ್ಲಿ ಜುಲೈ 30!
ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳು ಜಾಗತಿಕವಾಗಿ ಶುಕ್ರವಾರದಂದು ತೆರೆಕಾಣುತ್ತವೆ. ಆದರೆ ಭಾರತದಲ್ಲಿ ಸ್ಪೈಡರ್-ಮ್ಯಾನ್ ಚಿತ್ರಗಳಿಗೆ ಇರುವ ಭಾರಿ ಕ್ರೇಜ್ ಗಮನದಲ್ಲಿಟ್ಟುಕೊಂಡು, ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಜುಲೈ 30 ರಂದೇ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇನ್ನು ವಿಶೇಷವೆಂದರೆ, ಈ ಚಿತ್ರವು ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.
ಜೂನ್ 17 ರಿಂದಲೇ ಅಡ್ವಾನ್ಸ್ ಬುಕಿಂಗ್ ಆರಂಭ:
ಚಿತ್ರದ ಮೇಲಿರುವ ಭಾರಿ ನಿರೀಕ್ಷೆಯಿಂದಾಗಿ ಚಿತ್ರಮಂದಿರಗಳ ಟಿಕೆಟ್ ಬುಕಿಂಗ್ ಜೂನ್ 17 ರಿಂದಲೇ ಭಾರತದಾದ್ಯಂತ ಆರಂಭವಾಗಲಿದೆ. ಪ್ರೇಕ್ಷಕರು IMAX, 4DX ಮತ್ತು 3D ಸ್ಕ್ರೀನ್‌ಗಳಿಗಾಗಿ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು.
ಹೊಸ ಸವಾಲುಗಳೊಂದಿಗೆ ಬರಲಿದ್ದಾನೆ ಟಾಮ್ ಹಾಲೆಂಡ್:
‘ಸ್ಪೈಡರ್-ಮ್ಯಾನ್: ನೋ ವೇ ಹೋಮ್’ (2021) ಚಿತ್ರದ ಭಾರಿ ಯಶಸ್ಸಿನ ನಂತರ ಬರುತ್ತಿರುವ ಈ ಮುಂದಿನ ಭಾಗವನ್ನು ‘ಶಾಂಗ್-ಚಿ’ ಖ್ಯಾತಿಯ ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶಿಸಿದ್ದಾರೆ. ಇಡೀ ಜಗತ್ತೇ ಪೀಟರ್ ಪಾರ್ಕರ್‌ನನ್ನು ಮರೆತಿರುವಾಗ, ಆತ ಒಂಟಿಯಾಗಿ ಹೇಗೆ ಹೊಸ ಖಳನಾಯಕರನ್ನು ಎದುರಿಸಲಿದ್ದಾನೆ ಎಂಬುದು ಚಿತ್ರದ ಪ್ರಮುಖ ಕಥಾಹಂದರವಾಗಿದೆ. ಚಿತ್ರದಲ್ಲಿ ಟಾಮ್ ಹಾಲೆಂಡ್ ಜತೆಗೆ ಜೆಂಡಾಯಾ, ಸ್ಯಾಡಿ ಸಿಂಕ್, ಮಾರ್ಕ್ ರುಫಾಲೋ ಮತ್ತು ಜಾನ್ ಬೆರ್ಂತಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.



