June 12, 2026
Friday, June 12, 2026
spot_img

16 ವರ್ಷಗಳ ಅದ್ಭುತ ಕ್ರಿಕೆಟ್ ಪಯಣಕ್ಕೆ ಬ್ರೇಕ್: 19,346 ರನ್ ಗಳಿಸಿ ನಿವೃತ್ತಿ ಹೊಂದಿದ ನ್ಯೂಜಿಲೆಂಡ್ ದಿಗ್ಗಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್;

ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಮತ್ತು ಮಾಜಿ ನಾಯಕ ಕೇನ್ ವಿಲಿಯಮ್ಸನ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರದೊಂದಿಗೆ ಅವರ 16 ವರ್ಷಗಳ ಸುದೀರ್ಘ ಹಾಗೂ ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ.

ದಾಖಲೆಗಳ ಸರದಾರ ಕಿವೀಸ್ ರನ್ ಮಷೀನ್:
35 ವರ್ಷದ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಪರ ಮೂರೂ ಮಾದರಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆ ಹೊಂದಿದ್ದಾರೆ. ಇವರು ಒಟ್ಟು 378 ಪಂದ್ಯಗಳಲ್ಲಿ 19,346 ರನ್‌ಗಳ ಜತೆ 48 ಶತಕಗಳನ್ನು ಗಳಿಸಿದ್ದಾರೆ.

ಕಿವೀಸ್ ಕ್ರಿಕೆಟ್‌ನ ಸುವರ್ಣ ಯುಗದ ನಾಯಕ:
2016 ರಿಂದ 2024 ರವರೆಗೆ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದ ವಿಲಿಯಮ್ಸನ್ ನಾಯಕತ್ವದ ಶೈಲಿ ಕ್ರಿಕೆಟ್ ಜಗತ್ತಿನಾದ್ಯಂತ ಅಪಾರ ಪ್ರಶಂಸೆ ಗಳಿಸಿತ್ತು. ಅವರ ನೇತೃತ್ವದಲ್ಲಿ ಕಿವೀಸ್ ಪಡೆ 2021 ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಇದಲ್ಲದೆ ತಂಡವನ್ನು ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಾಗೂ ಮೂರು ಬಾರಿ ಸೆಮಿಫೈನಲ್‌ಗೆ ಮುನ್ನಡೆಸಿದ್ದರು.

ಸ್ವ ಇಚ್ಛೆಯಂತೆ ವಿದಾಯ ಹೇಳಿದ ಕೇನ್:
ತಮ್ಮ ನಿವೃತ್ತಿ ಕುರಿತು ಮಾತನಾಡಿರುವ ವಿಲಿಯಮ್ಸನ್, ನಾನು ಇದರ ಬಗ್ಗೆ ಕೆಲವು ದಿನಗಳಿಂದ ಯೋಚಿಸುತ್ತಿದ್ದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ಹೊರನಡೆಯಲು ಇದುವೇ ಸರಿಯಾದ ಸಮಯ. ನ್ಯೂಜಿಲೆಂಡ್ ತಂಡದ ಪರ ಆಡಿದ ಪ್ರತಿ ಪಂದ್ಯದಲ್ಲೂ ನನ್ನ ನೂರಕ್ಕೆ ನೂರರಷ್ಟು ಶ್ರಮವನ್ನು ನೀಡಿದ್ದೇನೆ ಎಂಬ ಹೆಮ್ಮೆ ನನಗಿದೆ. ನನ್ನ ಸ್ವಂತ ನಿರ್ಧಾರದ ಮೇರೆಗೆ ಗೌರವಯುತವಾಗಿ ವಿದಾಯ ಹೇಳುತ್ತಿರುವುದಕ್ಕೆ ಸಂತಸವಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಕ್ಕೆ:
ಹಾಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲೇ ಕೇನ್ ನಿವೃತ್ತಿ ಘೋಷಿಸಿರುವುದರಿಂದ, ಅವರು ಸರಣಿಯ ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ. ಅವರ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಶೀಘ್ರದಲ್ಲೇ ಪ್ರಕಟಿಸಲಿದೆ. ವಿಲಿಯಮ್ಸನ್ ನಿವೃತ್ತಿಗೆ ರಿಚರ್ಡ್ ಹ್ಯಾಡ್ಲಿ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಹಾಗೂ ಕೋಚ್ ರಾಬ್ ವಾಲ್ಟರ್ ಶ್ಲಾಘನೆ ವ್ಯಕ್ತಪಡಿಸಿದ್ದು, ಅವರೊಬ್ಬ ಅದ್ಭುತ ನಾಯಕ ಮತ್ತು ಕ್ರಿಕೆಟ್ ರಾಯಭಾರಿ ಎಂದು ಬಣ್ಣಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !