ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವಿತೀಯ ಮಹಾಯುದ್ಧದ ವೇಳೆ ಆಗಿನ ಪೂರ್ವ ಪೋಲೆಂಡ್ (ಈಗಿನ ಉಕ್ರೇನ್‌ನ ಲ್ವಿವ್ ಪ್ರದೇಶ)ದಲ್ಲಿ ಕುಟುಂಬವು ಬಚ್ಚಿಟ್ಟಿದ್ದ ಅಮೂಲ್ಯ ನಿಧಿಯನ್ನು ತಂದೆ ಬರೆದ ಮ್ಯಾಪ್ ನೆರವಿನಿಂದ 80 ವರ್ಷಗಳ ಬಳಿಕ ಮಗ ಪತ್ತೆಹಚ್ಚಿದ್ದಾನೆ. ಈ ಇಂಟ್ರೆಸ್ಟಿಂಗ್ ಸ್ಟೋರಿ ಹೀಗಿದೆ…
ಜಾನ್ ಗ್ಲಾಜೆವ್ಸ್ಕಿ ಎಂಬ ನಿವೃತ್ತ ಪ್ರಾಧ್ಯಾಪಕನ ಕುಟುಂಬವು ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಯುದ್ಧದ ಭೀತಿಯಿಂದ ಕುಟುಂಬವು ತಮ್ಮ ಬೆಳ್ಳಿ ಪಾತ್ರೆಗಳು, ಆಭರಣಗಳು ಹಾಗೂ ಹಲವು ಪಾರಂಪರಿಕ ವಸ್ತುಗಳನ್ನು ಭೂಮಿಯಲ್ಲಿ ಹೂತು ಅಲ್ಲಿಂದ ಪಲಾಯನ ಮಾಡಿತ್ತು. ಆದರೆ ಜಾನ್ ಗ್ಲಾಜೆವ್ಸ್ಕಿ ಗೆ ತಮ್ಮ ತಂದೆ ಗುಸ್ತಾವ್ ಗ್ಲಾಜೆವ್ಸ್ಕಿ ಬರೆದಿದ್ದ ಮ್ಯಾಪ್ ಸಿಕ್ಕಿತ್ತು. ಅವರು ಅದನ್ನು ಆಧರಿಸಿ ಹಲವು ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ಇತ್ತ ಯುದ್ಧದ ಬಳಿಕ ರಾಜಕೀಯ ಗಡಿಗಳು ಬದಲಾಗಿದ್ದು, ಕುಟುಂಬದ ಆಸ್ತಿ ಇದ್ದ ಪ್ರದೇಶವೂ ಸಂಪೂರ್ಣ ಬದಲಾಗಿತ್ತು.
ಹಳೆಯ ಕಟ್ಟಡಗಳು ನಾಶವಾಗಿದ್ದರೆ, ಹಲವು ಸ್ಥಳಗಳು ಕಾಡಾಗಿ ಮಾರ್ಪಟ್ಟಿದ್ದವು. ಆದರೂ ತಂದೆ ನೀಡಿದ್ದ ನಕ್ಷೆಯ ಮೇಲಿನ ನಂಬಿಕೆ ಕಳೆದುಕೊಳ್ಳದ ಜಾನ್, ಹಲವು ವರ್ಷಗಳ ಪರಿಶ್ರಮದ ಬಳಿಕ ಆ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು.
ಇದನ್ನೂ ಓದಿ:
ಸ್ಥಳೀಯರ ಸಹಕಾರ ಮತ್ತು ಮೆಟಲ್ ಡಿಟೆಕ್ಟರ್ ಸಹಾಯದಿಂದ ನಡೆಸಿದ ಶೋಧ ಕಾರ್ಯದಲ್ಲಿ ಕೊನೆಗೂ ಭೂಮಿಯಡಿಯಲ್ಲಿ ಹೂತು ಇಡಲಾಗಿದ್ದ ಅಮೂಲ್ಯ ವಸ್ತುಗಳು ಪತ್ತೆಯಾಗಿವೆ. ಮಣ್ಣಿನಡಿಯಿಂದ ಹೊರಬಂದ ಬೆಳ್ಳಿ ಪಾತ್ರೆಗಳು, ಪಾರಂಪರಿಕ ವಸ್ತುಗಳು ಮತ್ತು ಕುಟುಂಬದ ನೆನಪುಗಳಿಗೆ ಸಂಬಂಧಿಸಿದ ಸಾಮಗ್ರಿಗಳು ಉತ್ತಮ ಸ್ಥಿತಿಯಲ್ಲಿದ್ದವು ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಾನ್, ಇದು ಕೇವಲ ಸಂಪತ್ತಿನ ಹುಡುಕಾಟವಲ್ಲ. ನಮ್ಮ ಕುಟುಂಬದ ಇತಿಹಾಸ ಮತ್ತು ನಮ್ಮ ಹಿರಿಯರ ನೆನಪುಗಳನ್ನು ಮತ್ತೆ ಕಂಡುಕೊಂಡ ಕ್ಷಣ ಎಂದು ಭಾವುಕರಾಗಿದ್ದಾರೆ.
ಸುಮಾರು ಎಂಟು ದಶಕಗಳ ಹಿಂದೆ ಯುದ್ಧದ ಸಂದರ್ಭದಲ್ಲಿ ಕಳೆದುಹೋದ ಕುಟುಂಬದ ಪರಂಪರೆಯನ್ನು ಮತ್ತೆ ಒಂದಾಗಿಸಿದ ಈ ಘಟನೆ ವಿಶ್ವದಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದು, ಒಂದು ಕೈನಕ್ಷೆ ಮತ್ತು ಮಗನ ದೃಢ ಸಂಕಲ್ಪ ಇತಿಹಾಸದ ಪುಟಗಳನ್ನು ಮತ್ತೆ ತೆರೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.



