August 25, 2026
Tuesday, August 25, 2026
spot_img

“ಇದು ಗೃಹಲಕ್ಷ್ಮಿ ಅಲ್ಲ, ಚುನಾವಣಾ ಲಕ್ಷ್ಮೀ!”: ಗ್ಯಾರಂಟಿ ಮರು ಅರ್ಜಿ ಆದೇಶಕ್ಕೆ ಬಿ.ವೈ. ವಿಜಯೇಂದ್ರ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಜಾರಿಗೆ ತಂದಿರುವುದು ‘ಗೃಹಲಕ್ಷ್ಮಿ’ ಅಲ್ಲ, ಅದು ಕೇವಲ ‘ಚುನಾವಣಾ ಲಕ್ಷ್ಮೀ'” ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಡ್ಡಾಯವಾಗಿ ಮತ್ತೊಮ್ಮೆ ಮರು ಅರ್ಜಿ ಸಲ್ಲಿಸಬೇಕು ಎಂಬ ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆಗೆ ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರವು ನಕಲಿ ಫಲಾನುಭವಿಗಳ ನೆಪ ಒಡ್ಡಿ ಬಡವರ ಯೋಜನೆಗಳಿಗೆ ಕತ್ತರಿ ಹಾಕಲು ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಚುನಾವಣಾ ಗಿಮಿಕ್ ರಾಜಕಾರಣ:

ಲೋಕಸಭಾ ಚುನಾವಣೆ ಮುಗಿಯುವವರೆಗೂ ಮಹಿಳೆಯರ ಖಾತೆಗಳಿಗೆ ನಿಯಮಿತವಾಗಿ ಹಣ ಜಮೆ ಮಾಡಿ ಮತ ಸೆಳೆದ ಸರ್ಕಾರ, ಈಗ ಚುನಾವಣೆ ಮುಗಿದ ತಕ್ಷಣ ನಿಯಮಗಳನ್ನು ಕಠಿಣಗೊಳಿಸುತ್ತಿದೆ. ಇದು ಕೇವಲ ಅಧಿಕಾರ ಹಿಡಿಯಲು ಮಾಡಿದ ಗಿಮಿಕ್ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಬೊಕ್ಕಸ ಖಾಲಿಯಾಗಿದೆ:

ಗ್ಯಾರಂಟಿ ಯೋಜನೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದಂತಾಗಿದ್ದು, ಈಗ ಹೇಗಾದರೂ ಮಾಡಿ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಿ ಹಣ ಉಳಿಸಲು ಸರ್ಕಾರ ಈ ಹೊಸ ತಂತ್ರ ಹೂಡಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ:

ಬಡ ಮಹಿಳೆಯರಿಗೆ ತೊಂದರೆ:

ಮರು ಅರ್ಜಿ ಸಲ್ಲಿಕೆ, ಬಯೋಮೆಟ್ರಿಕ್ ದೃಢೀಕರಣ ಮತ್ತು ಲೈವ್ ಫೋಟೋ ಹೆಸರಿನಲ್ಲಿ ಗ್ರಾಮೀಣ ಭಾಗದ ಬಡ ಮಹಿಳೆಯರನ್ನು ಮತ್ತೊಮ್ಮೆ ಕಚೇರಿಗಳಿಗೆ ಅಲೆದಾಡುವಂತೆ ಮಾಡಿ ಸೌಲಭ್ಯಗಳಿಂದ ವಂಚಿಸಲು ಸರ್ಕಾರ ಬಿಗ್ ಶಾಕ್ ನೀಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಉಗ್ರ ಪ್ರತಿಭಟನೆಯ ಎಚ್ಚರಿಕೆ

ಯಾವುದೇ ಕಾರಣಕ್ಕೂ ಅರ್ಹ ಬಡ ಕುಟುಂಬಗಳ ಗೃಹಲಕ್ಷ್ಮಿ ಅಥವಾ ಗೃಹಜ್ಯೋತಿ ಸೌಲಭ್ಯಗಳನ್ನು ಕಡಿತಗೊಳಿಸಬಾರದು. ಒಂದು ವೇಳೆ ಮರು ಪರಿಶೀಲನೆ ಹೆಸರಿನಲ್ಲಿ ಬಡವರ ಸೌಲತ್ತುಗಳನ್ನು ಕಿತ್ತುಕೊಂಡರೆ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ರೂಪಿಸಲಿದೆ ಎಂದು ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !