ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಪ್ರಸಿದ್ಧ ಸಾಹಿತಿ ಪಿ. ಲಂಕೇಶ್ ಅವರ ಪತ್ನಿ, ಲೇಖಕಿ ಇಂದಿರಾ ಲಂಕೇಶ್ ಇಂದು ನಿಧನರಾಗಿದ್ದಾರೆ.
ಗೌರಿ ಲಂಕೇಶ್ ಅವರ ಜೊತೆ ವಾಸವಿದ್ದ ಇಂದಿರಾ ಅವರು ಮಗಳ ನಿಧನದ ನಂತರ ಕವಿತಾ ಲಂಕೇಶ್ ಅವರ ಜೊತೆ ವಾಸವಿದ್ದರು. ವಯೋಸಹಜ ಸಮಸ್ಯೆಗಳಿಂದ ಇಂದಿರಾ ಇಹಲೋಕ ತ್ಯಜಿಸಿದ್ದಾರೆ. ಪತಿಯ ಸಾಹಿತ್ಯದ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರು ಸ್ವತಃ ಪ್ರಮುಖ ಲೇಖಕಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಲಂಕೇಶ್ ಪತ್ರಿಕೆಯ ಹಿಂದೆಯೂ ಇಂದಿರಾ ಅವರ ಸಹಾಯವಿದೆ. ಪತ್ರಿಕೆಯ ಆಡಳಿತ, ಮುನ್ನಡೆ, ಪ್ರಕಾಶನದ ಜವಾಬ್ದಾರಿಯನ್ನು ನಿಭಾಯಿಸಿದ್ದು ಇಂದಿರಾ.
ಯಾವುದೇ ಪೂರ್ವ ವ್ಯವಹಾರದ ಹಿನ್ನೆಲೆ ಇಲ್ಲದಿದ್ದರೂ, ಕೇವಲ ತಮ್ಮ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಯಶಸ್ವಿಯಾಗಿ ಸೀರೆ ಉದ್ಯಮವನ್ನು ನಡೆಸಿ, ಕುಟುಂಬಕ್ಕೆ ಆರ್ಥಿಕ ಶಕ್ತಿಯಾಗಿದ್ದ ಸ್ವಾವಲಂಬಿ ಮಹಿಳೆ ಇಂದಿರಾ ಲಂಕೇಶ್. ಪತಿಯ ಬರವಣಿಗೆಯ ಸ್ವಾತಂತ್ರ್ಯಕ್ಕೆ ಮತ್ತು ಮಕ್ಕಳ ಉನ್ನತ ಬೆಳವಣಿಗೆಗೆ ಇವರ ದಿಟ್ಟತನ ಹಾಗೂ ಸ್ವಾಭಿಮಾನದ ಬದುಕೇ ಪ್ರೇರಣೆಯಾಗಿತ್ತು.
ಪಿ. ಲಂಕೇಶ್ ಅವರ ಪ್ರಸಿದ್ಧ ಆತ್ಮಕಥೆ ‘ಹುಳಿಮಾವಿನ ನೆರಳು’ ಕೃತಿಗೆ ಪೂರಕವಾಗುವಂತೆ, ತಮ್ಮ ಬದುಕಿನ ಅನುಭವಗಳನ್ನು ಧಾರೆ ಎರೆದು ಇಂದಿರಾ ಲಂಕೇಶ್ ಅವರು ಬರೆದ ‘ಹುಳಿಮಾವು ಮತ್ತು ನಾನು’ ಎಂಬ ಕೃತಿ ಸಾಹಿತ್ಯ ವಲಯದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ.



