ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಟನೆ ಮತ್ತು ಅದ್ಭುತ ವ್ಯಕ್ತಿತ್ವಕ್ಕೆ ಪರಭಾಷಾ ಚಿತ್ರರಂಗದಲ್ಲೂ ಭಾರಿ ಬೇಡಿಕೆಯಿದೆ. ಇತ್ತೀಚೆಗಷ್ಟೇ ತೆರೆಕಂಡ ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಸೂಪರ್ ಹಿಟ್ ‘ಪೆದ್ದಿ’ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಚಿತ್ರದ ಯಶಸ್ಸಿನ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ಅವರು ಶಿವಣ್ಣ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಿರ್ದೇಶಕ ಬುಚ್ಚಿಬಾಬು ಸನಾ ಅವರಿಗೆ ಚಿರಂಜೀವಿ, “ಶಿವರಾಜ್ ಕುಮಾರ್ ಈ ಪಾತ್ರ ಒಪ್ಪಿದ್ದೇ ಚಿತ್ರದ ಮೊದಲ ಯಶಸ್ಸು” ಎಂದು ಹೊಗಳಿದ್ದಾರೆ.
ಶಿವಣ್ಣನ ನಟನೆಗೆ ಚಿರಂಜೀವಿ ಫಿದಾ!
“ಶಿವಣ್ಣ ಅದ್ಭುತ ನಟ ಹಾಗೂ ಸಜ್ಜನ ವ್ಯಕ್ತಿ. ಸಿನಿಮಾದಲ್ಲಿ ಅವರು ರಾಮ್ ಚರಣ್‌ನನ್ನು ತಂದೆಯಂತೆ ಗದರಿಸುವ ಮತ್ತು ಶಿಸ್ತು ಕಲಿಸುವ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ” ಎಂದು ಚಿರಂಜೀವಿ ಹೇಳಿದ್ದಾರೆ. ರಾಜ್‌ಕುಮಾರ್ ಕುಟುಂಬದೊಂದಿಗೆ ದಶಕಗಳ ಆಪ್ತ ಸಂಬಂಧ ಹೊಂದಿರುವ ಚಿರಂಜೀವಿ, ಈ ಹಿಂದೆ ಕನ್ನಡದ ‘ಸಿಪಾಯಿ’ ಮತ್ತು ‘ಶ್ರೀ ಮಂಜುನಾಥ’ ಚಿತ್ರಗಳಲ್ಲಿ ನಟಿಸಿದ್ದರು.
‘ಗೌರ ನಾಯ್ಡು’ ಆಗಿ ಶಿವಣ್ಣನ ಮಾಸ್ ಎಂಟ್ರಿ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ‘ಗೌರ ನಾಯ್ಡು’ ಎಂಬ ಖಡಕ್ ಕುಸ್ತಿ ಗುರುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಪಾತ್ರಕ್ಕೆ ಕುಸ್ತಿ ಹೇಳಿಕೊಟ್ಟು, ಆತನ ಬದುಕನ್ನೇ ಬದಲಿಸುವ ಈ ಪಾತ್ರದಲ್ಲಿ ಶಿವಣ್ಣ ಭಾವುಕ ಹಾಗೂ ಮಾಸ್ ದೃಶ್ಯಗಳ ಮೂಲಕ ಧೂಳೆಬ್ಬಿಸಿದ್ದಾರೆ. ‘ಗೌತಮಿಪುತ್ರ ಶಾತಕರ್ಣಿ’ ಬಳಿಕ ಇದು ಶಿವಣ್ಣ ನಟಿಸಿರುವ ಎರಡನೇ ತೆಲುಗು ಚಿತ್ರವಾಗಿದೆ.



