June 17, 2026
Wednesday, June 17, 2026
spot_img

ಅಪರಾಧ ಜಾಲಕ್ಕೆ ಪೊಲೀಸ್ ಬ್ರೇಕ್: ಕೋಕಾ ಕಾಯ್ದೆಯಡಿ ಮೂವರ ಅರೆಸ್ಟ್

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ವಿವಿಧ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಕೋಕಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಆವರು ತಿಳಿಸಿದ್ದಾರೆ.

ಮಡಿಕೇರಿ ನಗರದ ಗೌಳಿಬೀದಿ ನಿವಾಸಿಗಳಾದ ಪ್ರಮೋದ್ ಅಲಿಯಾಸ್ ಡಿಸ್ಕ್ (34), ದರ್ಶನ್ ಅಲಿಯಾಸ್ ಗಿಲ್ಲಿ (30) ಹಾಗೂ ಕುಶಾಲನಗರ ರಸಲ್’ಪುರ ನಿವಾಸಿ ಯು.ಎಂ.ಶರೀಫ್ ಅಲಿಯಾಸ್ ಬಿಲಾಲ್ (34) ಎಂಬವರೇ ಕೋಕಾ‌ ಕಾಯ್ದೆಯಡಿ ಬಂಧನಕ್ಕೊಳಗಾದವರಾಗಿದ್ದು, ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇದನ್ನೂ ಓದಿ:

ಗೌಳಿಬೀದಿಯ ಪ್ರಮೋದ್‌ 2011 ರಿಂದ ವಿವಿಧ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಒಟ್ಟು 18 ಪ್ರಕರಣಗಳು ದಾಖಲಾಗಿವೆ. ದರ್ಶನ್ ವಿರುದ್ಧ 2015 ರಿಂದ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಶರೀಫ್ ವಿರುದ್ಧ 2016ರಿಂದ‌ ಒಟ್ಟು 12 ಪ್ರಕರಣಗಳು ದಾಖಲಾಗಿರುವುದಾಗಿ ಅವರು ಮಾಹಿತಿ ನೀಡಿದರು.

ಮಾದಕ ವಸ್ತು ಮಾರಾಟ: ಜಿಲ್ಲೆಯಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಸಮೀಪದ ಕುಂಜಿಲ ಗ್ರಾಮದ ಕೆ.ಯು.ಅಶ್ರಫ್ (34) ಎಂಬಾತನ ವಿರುದ್ಧ ಪಿಐಟಿ, ಎನ್‌ಡಿಪಿಎಸ್ ಕಾಯ್ದೆಯಡಿ ಆರು ಪ್ರಕರಣಗಳು ದಾಖಲಾಗಿದ್ದು, ಈತನನ್ನು ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಮಡಿಕೇರಿಯ ಗದ್ದಿಗೆ ನಿವಾಸಿ ನೂಫೈಲ್ (27) ಎಂಬಾತನ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದು, ಆತನನ್ನು ಕಲಬುರ್ಗಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !