ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರು ಮಿತಿಮೀರಿ ಅನಗತ್ಯ ರಸಗೊಬ್ಬರ ಬಳಕೆ ಮಾಡುವುದನ್ನು ನಿಯಂತ್ರಿಸಲು ಕೇಂದ್ರ ಸರಕಾರವು ರಸಗೊಬ್ಬರ ಖರೀದಿಗೆ ಆಪ್ ಬಿಡುಗಡೆಗೊಳಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದರು.
ಮೊಬೈಲ್ ಆಪ್ ಮೂಲಕ ರಸಗೊಬ್ಬರ ಕಾಯ್ದಿರಿಸಿ, ಖರೀದಿಸುವ ಬಗ್ಗೆ ಚಿತ್ರದುರ್ಗ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಮಂಗಳವಾರ ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಯಾವುದೇ ತೊಂದರೆ ಇಲ್ಲದೇ ತಾವಿರುವ ಸ್ಥಳದಿಂದಲೇ ಆಂಡ್ರಾಯ್ಡ್ ಮೊಬೈಲ್ ಮೂಲಕ ಅಗತ್ಯ ರಸಗೊಬ್ಬರ ಖರೀದಿಸಲು ಸಹಕಾರಿಯಾಗುವಂತೆ ಕೇಂದ್ರ ಸರಕಾರವು ಫರ್ಟಿಲೈಸರ‍್ಸ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್ (ಎಫ್‌ಎಸ್‌ಎಎಸ್) ಜಾರಿ ಮಾಡಿದೆ. ಇದಕ್ಕಾಗಿ ಫರ್ಟಿಲೈಸರ್ ಬುಕ್ಕಿಂಗ್ ಆಪ್ ಫಾರ್ ಫಾರ್ಮರ‍್ಸ್ (ಎಫ್‌ಬಿಎಫ್) ಆಪ್ ಬಿಡುಗಡೆಗೊಳಿಸಿದೆ. ಮೂರ‍್ನಾಲ್ಕು ದಿನಗಳಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದರು.
ರೈತರು ನಿಯಮಿತ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಕೆ ಮಾಡಬೇಕು. ಆ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ಇದರ ಮುಖ್ಯ ಉದ್ದೇಶ. ಆಂಡ್ರಾಯ್ಡ್ ಮೊಬೈಲ್ ಮೂಲಕ ರಸಗೊಬ್ಬರ ಕಾಯ್ದಿರಿಸಿ ಖರೀದಿಸಲು ತಾಲೂಕುವಾರು ಕೃಷಿ ಪರಿಕರ ಮಾರಾಟಗಾರರು, ಸ್ಥಳೀಯ ಕೃಷಿ ಸಖಿಯರಿಗೂ ತರಬೇತಿ ನೀಡಲಾಗಿದ್ದು ರೈತರು ಇವರ ಮೂಲಕ ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ:
ಸಹಾಯಕ ಕೃಷಿ ನಿರ್ದೇಶಕ ಜಾರಿದಳದ ಮಲ್ಲನಗೌಡ ಮಾತನಾಡಿ, ರಸಗೊಬ್ಬರ ಖರೀದಿ ಆಪ್ ಬಳಕೆ ಕುರಿತು ಮಾಹಿತಿ ನೀಡಿದರು. ಜೂ.17 ರಿಂದಲೇ ಈ ವ್ಯವಸ್ಥೆ ಜಾರಿಯಾಗಬೇಕಿತ್ತು. ತಾಂತ್ರಿಕ ಕಾರಣದಿಂದ ಆಪ್ ಬಿಡುಗಡೆಯಲ್ಲಿ ವಿಳಂಬವಾಗಿದೆ. ಇನ್ನು ಮೂರ‍್ನಾಲ್ಕು ದಿನಗಳಲ್ಲಿ ಅನುಷ್ಟಾನವಾಗಲಿದೆ ಎಂದು ತಿಳಿಸಿದರು.
ರೈತರು ಆಂಡ್ರಾಯ್ಡ್ ಮೊಬೈಲ್ ಫೋನ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಎಫ್‌ಐಡಿ, ಹಿಡುವಳಿ ವಿಸ್ತೀರ್ಣ ಇತ್ಯಾದಿ ಮಾಹಿತಿ ಲಭ್ಯವಾಗಲಿದೆ. ಮೊಬೈಲ್‌ಗೆ ಒಟಿಪಿ ಬಂದ ನಂತರ 2-3 ದಿನಗಳೊಳಗೆ ಗೊಬ್ಬರ ಖರೀದಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಕೆ.ಎಸ್.ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ.ರಾಮಕೃಷ್ಣ ಸೇರಿದಂತೆ ತಾಲೂಕಿನ ಕೃಷಿ ಅಧಿಕಾರಿಗಳು, ಕೃಷಿ ಪರಿಕಾರ ಮಾರಾಟಗಾರರು ಉಪಸ್ಥಿತರಿದ್ದರು.



