June 17, 2026
Wednesday, June 17, 2026
spot_img

ನಿಮ್ಮ ನೆಚ್ಚಿನ ಸೋಷಿಯಲ್ ಮೀಡಿಯಾಗಳು ಇನ್ನು ಉಚಿತವಲ್ಲವೇ? ಏನಿದು ಮೆಟಾ ಪ್ಲಸ್ ಯೋಜನೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣ ದೈತ್ಯ ‘ಮೆಟಾ’ ತನ್ನ ಬಳಕೆದಾರರಿಗೆ ದಿಢೀರ್ ಶಾಕ್ ನೀಡಿದೆ. ತನ್ನ ಪ್ರಸಿದ್ಧ ಆ್ಯಪ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ಗಾಗಿ ಹೊಸ ಜಾಗತಿಕ “ಪ್ಲಸ್” ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಮೆಟಾದ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥೆ ನವೋಮಿ ಗ್ಲೈಟ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಯಾವ ಆ್ಯಪ್‌ಗೆ ಎಷ್ಟು ದರ?

ಟ್ವಿಟರ್ ಮಾದರಿಯಲ್ಲಿ ತರಲಾಗಿರುವ ಈ ಪ್ರೀಮಿಯಂ ಮತ್ತು ವಿಶೇಷ ಫೀಚರ್‌ಗಳ ಐಚ್ಛಿಕ ಯೋಜನೆಗಳ ದರ ಪಟ್ಟಿ ಹೀಗಿದೆ:

ಇನ್‌ಸ್ಟಾಗ್ರಾಮ್ ಪ್ಲಸ್: ತಿಂಗಳಿಗೆ ಸುಮಾರು $3.99 (₹377)

ಫೇಸ್‌ಬುಕ್ ಪ್ಲಸ್: ತಿಂಗಳಿಗೆ ಸುಮಾರು $3.99 (₹377)

ವಾಟ್ಸಾಪ್ ಪ್ಲಸ್: ತಿಂಗಳಿಗೆ ಸುಮಾರು $2.99 (₹282)

ಗಮನಿಸಿ: ನಿಮ್ಮ ಸದ್ಯದ ಸಾಮಾನ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಆ್ಯಪ್‌ಗಳು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿವೆ.

ಬದಲಾವಣೆಗೆ ಕಾರಣವೇನು?

ಮೆಟಾ ಸಂಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರಲು, ತನ್ನ AI ಡೇಟಾ ಸೆಂಟರ್‌ಗಳ ಮೂಲಸೌಕರ್ಯಕ್ಕಾಗಿ ಈ ವರ್ಷ ಬರೋಬ್ಬರಿ $125 ಬಿಲಿಯನ್‌ನಿಂದ $145 ಬಿಲಿಯನ್ (ಸುಮಾರು ₹10 ಲಕ್ಷ ಕೋಟಿಗೂ ಅಧಿಕ) ಬಂಡವಾಳ ಹೂಡಿಕೆ ಮಾಡುತ್ತಿದೆ. ಈ ಭಾರಿ ವೆಚ್ಚವನ್ನು ಸರಿದೂಗಿಸಲು ಕಂಪನಿಗೆ ಹೊಸ ಆದಾಯದ ಮೂಲಗಳ ಅಗತ್ಯವಿದೆ.

ಇಷ್ಟು ವರ್ಷ ಕೇವಲ ಜಾಹೀರಾತುಗಳ ಮೇಲೆಯೇ ಶೇ. 90ಕ್ಕಿಂತ ಹೆಚ್ಚು ಅವಲಂಬಿತವಾಗಿದ್ದ ಮೆಟಾ, ಈಗ ಮಾರುಕಟ್ಟೆಯ ಏರಿಳಿತಗಳಿಂದ ಸುರಕ್ಷಿತವಾಗಿರಲು ನೇರ ಚಂದಾದಾರಿಕೆ ಮಾದರಿಗೆ ಬದಲಾಗುತ್ತಿದೆ. ಜೊತೆಗೆ, AI ಹೂಡಿಕೆಯಿಂದ ತಕ್ಷಣಕ್ಕೆ ಆದಾಯ ತರುವಂತೆ ಹೂಡಿಕೆದಾರರಿಂದ ಕೇಳಿಬಂದಿದ್ದ ಒತ್ತಡವೂ ಮೆಟಾದ ಈ ಮಹತ್ವದ ನಿರ್ಧಾರಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !