October 7, 2026
Wednesday, October 7, 2026
spot_img

ಏಷ್ಯನ್ ಗೇಮ್ಸ್ ಪದಕ ವಿಜೇತೆ ವಿತ್ಯಾ ರಾಮರಾಜ್ ಭೇಟಿಯಾದ ನಟ ಧನುಷ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿ, ಪದಕ ಮುಡಿಗೇರಿಸಿಕೊಂಡ ಹೆಮ್ಮೆಯ ಅಥ್ಲೀಟ್ ವಿತ್ಯಾ ರಾಮರಾಜ್ ಅವರನ್ನು ಕಾಲಿವುಡ್ ಸೂಪರ್‌ಸ್ಟಾರ್ ಧನುಷ್ ಭೇಟಿಯಾಗಿ ಅಭಿನಂದಿಸಿದ್ದಾರೆ. ಕ್ರೀಡಾ ಲೋಕದಲ್ಲಿ ದೇಶದ ಹೆಮ್ಮೆಯನ್ನು ಹೆಚ್ಚಿಸಿದ ತಮಿಳುನಾಡಿನ ಈ ಯುವ ಸಾಧಕಿಯ ಯಶಸ್ಸನ್ನು ಕೊಂಡಾಡಲು ನಟ ಧನುಷ್ ಅವರೇ ಖುದ್ದಾಗಿ ಈ ಭೇಟಿ ಮಾಡಿದ್ದಾರೆ.

ಮೈದಾನದ ಸಾಧಕಿಗೆ ಸಿನಿ ತಾರೆಯ ಗೌರವ

ಏಷ್ಯನ್ ಗೇಮ್ಸ್‌ನ ಮಹಿಳೆಯರ 400ಮೀಟರ್ ಅಡೆತಡೆ ಓಟ ಹಾಗೂ ರಿಲೇ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಪದಕ ಗೆದ್ದಿದ್ದ ವಿತ್ಯಾ ರಾಮರಾಜ್ ಅವರ ಪರಿಶ್ರಮವನ್ನು ಧನುಷ್ ಮುಕ್ತಕಂಠದಿಂದ ಶ್ಲಾಘಿಸಿದರು. ಭೇಟಿಯ ವೇಳೆ ವಿತ್ಯಾ ಅವರ ಪದಕಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದ ಧನುಷ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮಿಳುನಾಡು ಮತ್ತು ಭಾರತದ ಹೆಸರನ್ನು ಎತ್ತಿ ಹಿಡಿದಿದ್ದಕ್ಕಾಗಿ ಧನ್ಯವಾದ ತಿಳಿಸಿದರು. ಅಲ್ಲದೆ, ಮುಂಬರುವ ಒಲಿಂಪಿಕ್ಸ್‌ನಲ್ಲೂ ಅವರು ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿ ಬೆಂಬಲದ ಭರವಸೆ ನೀಡಿದರು.

ಇದನ್ನೂ ಓದಿ:

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್

ತಮ್ಮ ನೆಚ್ಚಿನ ನಟನನ್ನು ಭೇಟಿಯಾದ ಕ್ಷಣದ ಸುಂದರ ಫೋಟೋಗಳನ್ನು ಅಥ್ಲೀಟ್ ವಿತ್ಯಾ ರಾಮರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ʼನನ್ನ ರೋಲ್ ಮಾಡೆಲ್ ಮತ್ತು ನೆಚ್ಚಿನ ನಟ ಧನುಷ್ ಸರ್ ಅವರನ್ನು ಭೇಟಿಯಾಗಿದ್ದು ನನ್ನ ಜೀವನದ ಸೌಭಾಗ್ಯದ ಕ್ಷಣ. ನನ್ನ ಸಾಧನೆಯನ್ನು ಗುರುತಿಸಿ ಅವರು ನೀಡಿದ ಪ್ರೋತ್ಸಾಹ ಮುಂದಿನ ಓಟಕ್ಕೆ ನನಗೆ ಇನ್ನು ಹೆಚ್ಚಿನ ಶಕ್ತಿ ನೀಡಿದೆʼ ಎಂದು ವಿತ್ಯಾ ಭಾವುಕರಾಗಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗುತ್ತಿದ್ದು, ಇಬ್ಬರು ಸಾಧಕರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Must Read