June 18, 2026
Thursday, June 18, 2026
spot_img

ಮಂಗಳೂರು ನಗರದ ಹಲವು ಭಾಗಗಳಿಗೆ ಕಲುಷಿತ ನೀರು ಪೂರೈಕೆ: ನೂರಕ್ಕೂ ಅಧಿಕ ಮಂದಿಗೆ ಆರೋಗ್ಯ ಸಮಸ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.31ರ ಬಿಜೈನ ಬಿಜೈ, ಬಟ್ಟಗುಡ್ಡೆ, ಬಿಜೈ ನ್ಯೂರೋಡ್ ಕದ್ರಿ ಪ್ರದೇಶಗಳಲ್ಲಿ ಕಳೆದ ಕೆಲ ಸಮಯದಿಂದ ಕಲುಷಿತ ನೀರು ಪೂರೈಕೆಯಾಗಿ ನೂರಕ್ಕೂ ಅಧಿಕ ಸ್ಥಳೀಯರಿಗೆ ಆರೋಗ್ಯ ಸಮಸ್ಯೆ ಉಂಟಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕುಡಿಯುವ ನೀರಿನ ಪೈಪ್‌ಲೈನ್ ಜತೆಯಲ್ಲೇ ಒಳಚರಂಡಿ ಪೈಪ್‌ಲೈನ್ ಹಾದು ಹೋಗುತ್ತಿರುವ ಕಾರಣ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರು ಕಲುಷಿತಗೊಂಡು ಜನಸಾಮಾನ್ಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

ಕಳೆದ ಹಲವು ಸಮಯದಿಂದ ಕಲುಷಿತ ನೀರು ಸೇವನೆಯಿಂದಾಗಿ ಬಿಜೈ ಪ್ರದೇಶದ ಹಲವರಿಗೆ ವಾಂತಿ ಬೇಧಿ ಸೇರಿದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಪ್ರಯೋಗಾಲಯದ ವರದಿಯಂತೆ ನೀರು ಕುಡಿಯಲು ಯೋಗ್ಯ ವಾಗಿಲ್ಲ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಜನರು ಕುಡಿಯುವ ನೀರನ್ನು ಖರೀದಿಸಿ ಬಳಸುವಂತಾಗಿದೆ. ಕಾಮಗಾರಿಯ ಸಂದರ್ಭ ನೀರಿನ ಪೈಪ್‌ಲೈನ್ ಒಡೆದು ಅದರಲ್ಲಿ ಮಳೆಯ ಮಣ್ಣು ಮಿಶ್ರಿತ ನೀರು ಸೇರಿರುವ ಅಥವಾ ಒಳಚರಂಡಿ ನೀರು ಸೇರ್ಪಡೆಯಾಗಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಪಾಲಿಕೆ ಅಧಿಕಾರಿಗಳು ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿಯ ಹಿನ್ನೆಲೆಯಲ್ಲಿ, ನೀರು ಪೂರೈಕೆಯ ಟ್ಯಾಂಕ್ ಸ್ವಚ್ಛಗೊಳಿಸಿ ಸರಿಪಡಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗಾಲದ ಆರಂಭ ಹಾಗೂ ನಗರದ ವಿವಿಧೆಡೆ ರಸ್ತೆ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೈಪ್‌ಲೈನ್‌ಗಳಿಗೆ ತೊಂದರೆ ಉಂಟಾಗಿ ಕಲುಷಿತ ನೀರು ಪೂರೈಕೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಈ ಪ್ರದೇಶದ ಟ್ಯಾಂಕ್ ಸ್ವಚ್ಛಗೊಳಿಸಿ ಕುಡಿಯುವ ನೀರಿನ ಪೂರೈಕೆಯಲ್ಲಾಗಿದ್ದ ವ್ಯತ್ಯಯವನ್ನು ಸರಿಪಡಿಸಲಾಗಿದೆ ಎಂದು ಪಾಲಿಕೆಯ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !