ಇಂದಿನ ಗಡಿಬಿಡಿಯ ಜೀವನದಲ್ಲಿ ರಾತ್ರಿ ಊಟ ಮುಗಿಸಿ ಟಿವಿ ಮುಂದೆ ಕುಳಿತು ನೆಚ್ಚಿನ ಧಾರಾವಾಹಿ ಅಥವಾ ಸಿನಿಮಾ ನೋಡುವುದು ಪ್ರತಿಯೊಬ್ಬರ ನೆಚ್ಚಿನ ಹವ್ಯಾಸ. ಆದರೆ, ಈ ಆರಾಮದಾಯಕ ಅಭ್ಯಾಸವು ನಿಮ್ಮ ಹೃದಯದ ಆರೋಗ್ಯವನ್ನು ನಿಧಾನವಾಗಿ ಹಾಳುಮಾಡುತ್ತಿದೆ ಎಂದರೆ ನೀವು ನಂಬಲೇಬೇಕು!
ರಾತ್ರಿ ಹೊತ್ತು ಸುಮ್ಮನೆ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಅಥವಾ ಮಲಗಿ ಟಿವಿ ನೋಡುವುದರಿಂದ ನಮ್ಮ ದೇಹದಲ್ಲಿ ರಕ್ತಸಂಚಾರ ನಿಧಾನಗೊಳ್ಳುತ್ತದೆ. ಸುದೀರ್ಘ ಸಮಯ ಶಾರೀರಿಕ ಚಟುವಟಿಕೆ ಇಲ್ಲದಿರುವುದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮುಂದೆ ಹೃದಯಾಘಾತ ಹಾಗೂ ಪಾರ್ಶ್ವವಾಯು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ.
ಟಿವಿ, ಮೊಬೈಲ್ ಮತ್ತು ಕಂಪ್ಯೂಟರ್ ಸ್ಕ್ರೀನ್ಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಮ್ಮ ಮೆದುಳಿನಲ್ಲಿ ನಿದ್ರೆಯನ್ನು ತರುವ ‘ಮೆಲಟೋನಿನ್’ ಹಾರ್ಮೋನ್ ಉತ್ಪತ್ತಿಯನ್ನು ತಡೆಯುತ್ತದೆ. ತಡರಾತ್ರಿವರೆಗೆ ಟಿವಿ ನೋಡುವುದರಿಂದ ನಿದ್ರೆ ಹಾಳಾಗುತ್ತದೆ. ಸರಿಯಾದ ನಿದ್ರೆ ಇಲ್ಲದಿದ್ದರೆ ದೇಹದಲ್ಲಿ ಮಾನಸಿಕ ಒತ್ತಡದ ಹಾರ್ಮೋನ್ಗಳು ಹೆಚ್ಚಾಗಿ, ಹೃದಯದ ಮೇಲಿನ ಹೊರೆ ದ್ವಿಗುಣಗೊಳ್ಳುತ್ತದೆ.
ಟಿವಿ ನೋಡುತ್ತಾ ತಿನ್ನುವ ಅಭ್ಯಾಸ ಬಹುತೇಕರಿಗಿರುತ್ತದೆ. ಈ ಸಮಯದಲ್ಲಿ ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವೇ ಇಲ್ಲದೆ ಜಂಕ್ ಫುಡ್, ಎಣ್ಣೆ ಪದಾರ್ಥ ಅಥವಾ ಅತಿಯಾದ ಸಿಹಿತಿಂಡಿಗಳನ್ನು ಸೇವಿಸುತ್ತೇವೆ. ಇದು ಬೊಜ್ಜು ಬೆಳೆಯಲು ಕಾರಣವಾಗಿ, ನೇರವಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸರಳ ಪರಿಹಾರಗಳು
ರಾತ್ರಿ ಟಿವಿ ನೋಡುವ ಸಮಯವನ್ನು ದಿನಕ್ಕೆ ಗರಿಷ್ಠ 1 ರಿಂದ 2 ಗಂಟೆಗೆ ಮಿತಿಗೊಳಿಸಿ.
ಅರ್ಧ ಗಂಟೆಗೊಮ್ಮೆ ಎದ್ದು ನಿಂತು ಸ್ವಲ್ಪ ನಡೆದಾಡಿ.
ಮಲಗುವ ಕನಿಷ್ಠ 1 ಗಂಟೆ ಮುಂಚೆ ಟಿವಿ, ಮೊಬೈಲ್ ಆಫ್ ಮಾಡಿ.
ಟಿವಿ ನೋಡುವಾಗ ನಟ್ಸ್, ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸುವುದು ತಪ್ಪಲ್ಲ, ಆದರೆ ಅದು ನಿಮ್ಮ ಆರೋಗ್ಯಕ್ಕೆ ಮುಳುವಾಗಬಾರದು. ಇಂದೇ ಲೇಟ್ ನೈಟ್ ಟಿವಿ ಅಭ್ಯಾಸಕ್ಕೆ ಗುಡ್ಬೈ ಹೇಳಿ, ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಿ.



