ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಮಹತ್ವದ ತಿರುವು ಸಿಗುತ್ತಿದ್ದು, ‘ಆಪರೇಷನ್ ಟೈಗರ್’ ಇಡೀ ದೇಶದ ಗಮನ ಸೆಳೆದಿದೆ. ಶಿವಸೇನೆಯ ಆಂತರಿಕ ಕಲಹ ತಾರಕಕ್ಕೇರಿದ್ದು, ಉದ್ಧವ್ ಠಾಕ್ರೆ ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ರೆಬೆಲ್ ಸಂಸದರು ಕಾಣಿಸಿಕೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಲಿರುವ ಡಿಸಿಎಂ ಶಿಂಧೆ
ವಿಶ್ವಸನೀಯ ಮೂಲಗಳ ಪ್ರಕಾರ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂದು ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಈ ಹೈವೋಲ್ಟೇಜ್ ಸಭೆಯಲ್ಲಿ ‘ಆಪರೇಷನ್ ಟೈಗರ್’ನ ಮುಂದಿನ ಕಾರ್ಯತಂತ್ರಗಳು ಹಾಗೂ ಉದ್ಧವ್ ಬಣದ ಬಂಡಾಯ ಸಂಸದರು ಇಟ್ಟಿರುವ ರಹಸ್ಯ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಆದರೆ, ಈ ರೆಬೆಲ್ ನಾಯಕರ ಅಧಿಕೃತ ಬೇಡಿಕೆಗಳೇನು ಎಂಬುದು ಇನ್ನು ನಿಗೂಢವಾಗಿದೆ.
ಪಂಚತಾರಾ ಹೋಟೆಲ್‌ನಲ್ಲಿ ರೆಬೆಲ್ಸ್ ಪ್ರತ್ಯಕ್ಷ!
ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ನಡುವೆ, ಉದ್ಧವ್ ಬಣದ ಪ್ರಮುಖ ಸಂಸದರಾದ ನಾಗೇಶ್ ಪಾಟೀಲ್ ಅಶ್ಟಿಕರ್, ಸಂಜಯ್ ದಿನ ಪಾಟೀಲ್ ಮತ್ತು ಸಂಜಯ್ ದೇಶಮುಖ್ ಅವರು ಅಭಿಷೇಕ್ ವರ್ಮಾ ಅವರೊಂದಿಗೆ ದೆಹಲಿಯ ಪ್ರತಿಷ್ಠಿತ ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವುದು ಪತ್ತೆಯಾಗಿದೆ. ಈ ಬೆಳವಣಿಗೆಯು ಮಹಾರಾಷ್ಟ್ರ ಸರ್ಕಾರದಲ್ಲಿ ಮತ್ತೊಂದು ದಿಕ್ಚ್ಯುತಿ ಸೃಷ್ಟಿಸುವ ಮುನ್ಸೂಚನೆ ನೀಡಿದೆ.



