June 20, 2026
Saturday, June 20, 2026
spot_img

ವೈಜ್ಞಾನಿಕ ಆಧಾರವಿಲ್ಲದ ಔಷಧಿಗಳಿಗೆ ಗುಡ್‌ಬೈ: 16 ಎಫ್‌ಡಿಸಿ ಮೆಡಿಸಿನ್ ಗಳ ಮಾರಾಟಕ್ಕೆ ಕೇಂದ್ರದಿಂದ ಬ್ರೇಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ 16 ಸ್ಥಿರ-ಡೋಸ್ ಸಂಯೋಜನೆ (ಎಫ್‌ಡಿಸಿ) ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಗೆ ತಕ್ಷಣದಿಂದಲೇ ನಿಷೇಧ ಹೇರಿದೆ. ಈ ಔಷಧಿಗಳಿಗೆ ವೈದ್ಯಕೀಯವಾಗಿ ಸಮರ್ಪಕ ಆಧಾರ ಇಲ್ಲದಿರುವುದು ಹಾಗೂ ಅವುಗಳಿಂದಾಗುವ ಅಪಾಯಗಳು ಹೆಚ್ಚು ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಏನಿದು ಎಫ್‌ಡಿಸಿ ಔಷಧಿ?

ಸ್ಥಿರ-ಡೋಸ್ ಸಂಯೋಜನೆ ಔಷಧಿಗಳು ಎಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಔಷಧೀಯ ಅಂಶಗಳನ್ನು ನಿಗದಿತ ಪ್ರಮಾಣದಲ್ಲಿ ಸೇರಿಸಿ ತಯಾರಿಸಲಾದ ಮಾತ್ರೆಗಳು ಅಥವಾ ಔಷಧಿಗಳು. ಇವುಗಳ ಪರಿಣಾಮಕಾರಿತ್ವ ಹಾಗೂ ಸುರಕ್ಷತೆಯನ್ನು ಪರಿಶೀಲಿಸಿದ ಬಳಿಕವೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ತಜ್ಞರ ಸಮಿತಿಯ ವರದಿ ಆಧಾರ

ಸುಪ್ರೀಂ ಕೋರ್ಟ್ ಸೂಚನೆಯಂತೆ ಔಷಧ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ) ನೇಮಿಸಿದ್ದ ತಜ್ಞರ ಸಮಿತಿ ಹಲವು ಸಂಯೋಜನೆಗಳನ್ನು ಪರಿಶೀಲಿಸಿತ್ತು. ವೈಜ್ಞಾನಿಕ ಆಧಾರವಿಲ್ಲದ ಹಾಗೂ ಚಿಕಿತ್ಸಾ ದೃಷ್ಟಿಯಿಂದ ಸಮರ್ಥನೆ ಪಡೆಯದ ಔಷಧಿಗಳನ್ನು ಗುರುತಿಸಿ ವರದಿ ಸಲ್ಲಿಸಿತ್ತು.

ಯಾವ ಔಷಧಿಗಳು ಪಟ್ಟಿಯಲ್ಲಿ?

ನಿಷೇಧಿತ ಪಟ್ಟಿಯಲ್ಲಿ ಕೆಲವು ನೋವು ನಿವಾರಕ, ಆ್ಯಂಟಿಬಯಾಟಿಕ್, ಸ್ನಾಯು ಸೆಳೆತ ನಿವಾರಕ ಹಾಗೂ ಚರ್ಮರೋಗ ಚಿಕಿತ್ಸೆಗೆ ಬಳಸುವ ಸಂಯೋಜನೆಗಳು ಸೇರಿವೆ. ಅಮೋಕ್ಸಿಸಿಲಿನ್-ಸೆರಾಟಿಯೋಪೆಪ್ಟಿಡೇಸ್, ಸೆಫ್ಯೂರೋಕ್ಸೈಮ್-ಸೆರಾಟಿಯೋಪೆಪ್ಟಿಡೇಸ್ ಸೇರಿದಂತೆ ಹಲವು ಆ್ಯಂಟಿಬಯಾಟಿಕ್ ಆಧಾರಿತ ಸಂಯೋಜನೆಗಳಿಗೂ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ:

ತ್ವಚೆ ಆರೈಕೆ ಉತ್ಪನ್ನಗಳಿಗೂ ಹೊಡೆತ

ಅಲೋವೆರಾ, ವಿಟಮಿನ್ ಇ, ಟೀ ಟ್ರೀ ಎಣ್ಣೆ, ಜೊಜೋಬಾ ಎಣ್ಣೆ ಸೇರಿದಂತೆ ಹಲವು ಅಂಶಗಳನ್ನು ಸೇರಿಸಿ ತಯಾರಿಸಲಾಗುತ್ತಿದ್ದ ಕೆಲವು ತ್ವಚೆ ಆರೈಕೆ ಉತ್ಪನ್ನಗಳನ್ನೂ ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ.

ಆರೋಗ್ಯ ರಕ್ಷಣೆಯೇ ಮುಖ್ಯ ಗುರಿ

ಅನಗತ್ಯ ಹಾಗೂ ವೈಜ್ಞಾನಿಕ ದೃಢೀಕರಣವಿಲ್ಲದ ಔಷಧಿಗಳ ಬಳಕೆಯನ್ನು ತಡೆಯುವುದು, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಮಾತ್ರ ಜನರಿಗೆ ಲಭ್ಯವಾಗುವಂತೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !