August 4, 2026
Tuesday, August 4, 2026
spot_img

ಗಂಡು ಮಗುವಿಗೆ 8 ಲಕ್ಷ ರೂ, ಹೆಣ್ಣು ಮಗುವಿಗೆ 4 ಲಕ್ಷ ರೂ: ರಾಜಧಾನಿಯನ್ನು ಬೆಚ್ಚಿಬೀಳಿಸಿದ ‘ಬೇಬಿ ಬಜಾರ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಹಸುಗೂಸುಗಳ ಖರೀದಿ-ಮಾರಾಟ ನಡೆಸುತ್ತಿದ್ದ ದೊಡ್ಡ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ಹಲವು ರಾಜ್ಯಗಳ ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಗಂಡು ಮಗುವಿಗೆ ಹೆಚ್ಚು ಬೆಲೆ

ತನಿಖೆ ವೇಳೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ದರ ನಿಗದಿಪಡಿಸಲಾಗಿದ್ದ ಮಾಹಿತಿ ಬಹಿರಂಗವಾಗಿದೆ. ಕಡಿಮೆ ಮೊತ್ತಕ್ಕೆ ಮಕ್ಕಳನ್ನು ಪಡೆದು, ಮಕ್ಕಳಿಲ್ಲದ ದಂಪತಿಗಳಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಇಲ್ಲಿ ಗಂಡು ಮಗುವಿಗೆ 8 ಲಕ್ಷ ರೂ. ಹೆಣ್ಣು ಮಗುವನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದರು.

ಸುಳಿವಿನಿಂದ ಆರಂಭವಾದ ಕಾರ್ಯಾಚರಣೆ

ಒಬ್ಬ ಮಹಿಳೆ ಪದೇಪದೇ ಬೇರೆ ಬೇರೆ ಹಸುಗೂಸುಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ದೊರೆತ ಮಾಹಿತಿಯ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ನಕಲಿ ಗ್ರಾಹಕರಾಗಿ ಸಂಪರ್ಕ ಸಾಧಿಸಿದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಜಾಲದ ಸುಳಿವು ಪತ್ತೆಹಚ್ಚಿದರು.

ಇದನ್ನೂ ಓದಿ:

ಆಸ್ಪತ್ರೆಯೇ ಪ್ರಮುಖ ಕೇಂದ್ರ

ಬಂಧಿತರ ವಿಚಾರಣೆ ವೇಳೆ ರೋಹಿಣಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದು ಈ ದಂಧೆಯ ಕೇಂದ್ರವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ನಕಲಿ ದಾಖಲೆಗಳು ಮತ್ತು ಜನನ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಮಕ್ಕಳನ್ನು ಕಾನೂನುಬದ್ಧವಾಗಿ ಜನಿಸಿದವರಂತೆ ತೋರಿಸಲಾಗುತ್ತಿತ್ತು ಎನ್ನಲಾಗಿದೆ.

5 ಹಸುಗೂಸುಗಳ ರಕ್ಷಣೆ

ಈವರೆಗೆ ಹಲವು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಐದು ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ 30ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ರಕ್ಷಿಸಲಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !