ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಜಾಗತಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಉಲ್ಲೇಖಿಸಲು ರಾಜ್ಯ ಬಿಜೆಪಿ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ. ಪೋಸ್ಟ್ನಲ್ಲಿದ್ದ ಪದ ಬಳಕೆಯೇ ಪಕ್ಷದ ಬೆಂಬಲಿಗರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪೋಸ್ಟ್ನಲ್ಲಿ ಏನಿತ್ತು?
ರಾಜ್ಯ ಬಿಜೆಪಿ ತನ್ನ ಪೋಸ್ಟ್ನಲ್ಲಿ, ದೇಶದೊಳಗೆ ರಾಜಕೀಯ ವಿರೋಧಗಳಿದ್ದರೂ ಭಾರತದ ಹಿತಾಸಕ್ತಿ ಮತ್ತು ಸಾರ್ವಭೌಮತ್ವದ ವಿಚಾರದಲ್ಲಿ ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿಶ್ವದ ನಾಯಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಉಲ್ಲೇಖಿಸಿತ್ತು. ದೇಶದ ಹಿತವೇ ಮೊದಲ ಆದ್ಯತೆ ಎಂಬ ಅವರ ನಿಲುವಿಗೆ ಜಾಗತಿಕ ಗೌರವ ದೊರೆಯುತ್ತಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ:
ಪದ ಬಳಕೆಯೇ ವಿವಾದಕ್ಕೆ ಕಾರಣ
ಆದರೆ, “ದೇಶದೊಳಗೆ ಎಷ್ಟೇ ಜನ ವಿರೋಧಿಸಿದರೂ” ಎಂಬ ವಾಕ್ಯಪ್ರಯೋಗವೇ ವಿವಾದಕ್ಕೆ ಕಾರಣವಾಯಿತು. ಈ ಪದಗಳು ಪ್ರಧಾನಿ ಮೋದಿ ವಿರುದ್ಧ ದೇಶದೊಳಗೆ ವ್ಯಾಪಕ ವಿರೋಧವಿದೆ ಎಂಬ ಅರ್ಥ ನೀಡುತ್ತವೆ ಎಂದು ಕೆಲ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.
ಬೆಂಬಲಿಗರಿಂದಲೇ ಅಸಮಾಧಾನ
ಮೋದಿ ಅವರಿಗೆ ದೇಶದ ಜನರಲ್ಲಿ ಅಪಾರ ಬೆಂಬಲವಿದೆ. ರಾಜಕೀಯವಾಗಿ ವಿರೋಧ ಪಕ್ಷಗಳು ಟೀಕೆ ಮಾಡಬಹುದು, ಆದರೆ ಅದನ್ನು ಸಾಮಾನ್ಯ ಜನರ ವಿರೋಧವಾಗಿ ಬಿಂಬಿಸಬಾರದು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



