ಹೊಸದಿಗಂತ ವರದಿ ಚಿತ್ರದುರ್ಗ:
ಬಂಡಾಯ ಸಾಹಿತ್ಯ ಚಳವಳಿಯ ಇತಿಹಾಸವನ್ನು ದಾಖಲಿಸುವ ಹಾಗೂ ಹೊಸ ತಲೆಮಾರಿಗೆ ಆಕರ ಗ್ರಂಥವಾಗುವ ನಿಟ್ಟಿನಲ್ಲಿ ಕಥೆ, ಕವಿತೆ, ವಿಮರ್ಶೆ ಹಾಗೂ ವೈಚಾರಿಕ ಬರಹಗಳನ್ನು ಒಳಗೊಂಡ ಪ್ರತ್ಯೇಕ ’ಬಂಡಾಯ ಸಾಹಿತ್ಯ ಸಂಪುಟ’ಗಳನ್ನು ಪ್ರಕಟಿಸಲಾಗುವುದು ಎಂದು ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರು ಮಹತ್ವದ ಘೋಷಣೆ ಮಾಡಿದರು.
ನಗರದ ಪತ್ರಿಕಾ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಅಂಗವಾಗಿ ‘ಸೃಜನಶೀಲತೆ ಮತ್ತು ಪ್ರಭುತ್ವ’ ಕುರಿತ ಒಂದು ದಿನದ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಬಂಡಾಯ ಸಾಹಿತ್ಯದ ಚರಿತ್ರೆಯಲ್ಲಿ ವಿವಿಧ ಕಾಲಘಟ್ಟದ ಬರವಣಿಗೆಗಳನ್ನು ಒಂದೇ ಕಡೆ ಡಾಕ್ಯುಮೆಂಟ್ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಥೆಗಳು, ಕವಿತೆಗಳು, ವಿಮರ್ಶೆ ಹಾಗೂ ವೈಚಾರಿಕ ಲೇಖನಗಳನ್ನೊಳಗೊಂಡ ವಿಶಿಷ್ಟ ಸಂಪುಟಗಳನ್ನು ತರುವ ಯೋಜನೆಯ ಬೀಜರೂಪ ಚಿತ್ರದುರ್ಗದಲ್ಲೇ ಮೊಳಕೆಯೊಡೆದಿದೆ. ಈ ಐತಿಹಾಸಿಕ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ಇಂದಿನ ಯುವ ಪೀಳಿಗೆಯಲ್ಲಿ ಹೊಸ ವಿಷಯಗಳನ್ನು ತಿಳಿಯುವ, ಸಾಹಿತ್ಯವನ್ನು ಗ್ರಹಿಸುವ ಹಸಿವಿದೆ. ಆದರೆ ಹೊಸ ತಲೆಮಾರಿಗೆ ನಾವು ನೀಡಬೇಕಾದ್ದನ್ನು ಸರಿಯಾಗಿ ನೀಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನವನ್ನು ಹಿರಿಯರು ಮಾಡಿಕೊಳ್ಳಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳಲ್ಲಿ ಹಿರಿಯರು ಮಾರ್ಗದರ್ಶಕರಾಗಿ ಇರಬೇಕೇ ಹೊರತು, ವಿಷಯ ಮಂಡನೆ ಮತ್ತು ವೇದಿಕೆಯ ಮುಂಚೂಣಿಯಲ್ಲಿ ಹೊಸ ತಲೆಮಾರಿನವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ನಿರ್ಣಾಯಕ ತೀರ್ಮಾನವನ್ನು ನಾವು ಬೆಂಗಳೂರಿನ ಸಭೆಯಲ್ಲಿ ತೆಗೆದುಕೊಂಡಿದ್ದೆವು. ಅದರಂತೆ ಈ ಯುವಕರಲ್ಲಿ ಬರೆಯುವ ಉತ್ಸಾಹ ಮೂಡಿಸಬೇಕಿದೆ. ಚೀನಾದಲ್ಲಿ ಮಾವೋತ್ಸೆ ತುಂಗ್ ಅವರ ಚಳವಳಿ ಹುಟ್ಟಿದ್ದು ಕೇವಲ ನಾಲ್ಕು ಜನ ಲೈಬ್ರರಿಯಲ್ಲಿ ಕುಳಿತು ಮಾತನಾಡಿದ್ದರಿಂದಲೇ ಎಂಬುದನ್ನು ನೆನಪಿಟ್ಟುಕೊಂಡು ನಾವು ನಿರಾಶಾವಾದಿಗಳಾಗದೆ ಕೆಲಸ ಮಾಡಬೇಕು ಎಂದರು.
ಬಂಡಾಯ ಸಾಹಿತ್ಯ ಸಂಘಟನೆಯ ಹಲವು ಐತಿಹಾಸಿಕ ನಿರ್ಧಾರಗಳು ಮತ್ತು ಮೊದಲ ಹೆಜ್ಜೆಗಳಿಗೆ ಚಿತ್ರದುರ್ಗ ಸಾಕ್ಷಿಯಾಗಿದೆ. ಇಲ್ಲಿ ಹಿಂದೆ ನಡೆದ ಜನಸಂಸ್ಕೃತಿ ಸಮಾವೇಶ, ’ಭಾರತೀಯ ಸಾಹಿತ್ಯದಲ್ಲಿ ಬಂಡಾಯ ಪ್ರಜ್ಞೆ’ಯಂತಹ ರಾಷ್ಟ್ರೀಯ ವಿಚಾರ ಸಂಕಿರಣಗಳು ನಮ್ಮ ಸಂಘಟನೆಯ ಇತಿಹಾಸದಲ್ಲಿ ಮೈಲಿಗಲ್ಲುಗಳಾಗಿವೆ. ಇಂದು ನಡೆಯುತ್ತಿರುವ ಸೃಜನಶೀಲತೆ ಮತ್ತು ಪ್ರಭುತ್ವದ ನಡುವಿನ ಸಂಬಂಧದ ಚರ್ಚೆಯೂ ಸಮಕಾಲೀನ ಸವಾಲುಗಳನ್ನು ಎದುರಿಸಲು ನಮಗೆ ದಾರಿದೀಪವಾಗಲಿದೆ ಎಂದು ಆಶಿಸಿದರು.
ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಇಂದಿನ ಸಂಕೀರ್ಣ ಹಾಗೂ ದುರಿತ ಕಾಲಘಟ್ಟದಲ್ಲಿ ಕಳೆದುಹೋಗುತ್ತಿರುವ ಮನುಷ್ಯ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಮರಳಿ ಹುಡುಕಿ, ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಲು ಬಂಡಾಯ ಸಾಹಿತ್ಯದ ಸೈದ್ಧಾಂತಿಕ ಬದ್ಧತೆ ಅತ್ಯಂತ ಅಗತ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿಂತಕ ಯಾದವರೆಡ್ಡಿ, ಪ್ರಾಧ್ಯಾಪಕರಾದ ಅರುಣ್ ಜೋಳದ ಕೂಡ್ಲಿಗಿ, ನವೀನ್ ಮಂಡಗದ್ದೆ, ಕವಿ ಚಂದ್ರಶೇಖರ್ ತಾಳ್ಯ ಸೇರಿದಂತೆ ಮತ್ತಿರರು ಹಾಜರಿದ್ದರು.



