September 28, 2026
Monday, September 28, 2026
spot_img

ಧಾರಾಕಾರ ಮಳೆಗೆ ನಲುಗಿದ ಮುಂಬೈ: ಮುಂದಿನ 48 ಗಂಟೆಗಳ ಕಾಲ ಹೈ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳವಾರ ರಾತ್ರಿ ಸುರಿದ ಭೀಕರ ಮಳೆಯಿಂದಾಗಿ ಮುಂಬೈನ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತೀವ್ರ ಗಾಳಿ-ಮಳೆಗೆ ಹಲವೆಡೆ ಮರಗಳು ಉರುಳಿಬಿದ್ದಿದ್ದು, ಕೆಲವು ಭಾಗಗಳಲ್ಲಿ ಗೋಡೆ ಕುಸಿತದ ಘಟನೆಗಳು ವರದಿಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ (IMD) ಮುಂಬೈಗೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.

ದಾಖಲೆಯ ಮಳೆ ಪ್ರಮಾಣ

ಮಂಗಳವಾರ ರಾತ್ರಿ 8:30 ರಿಂದ ಬುಧವಾರ ಮುಂಜಾನೆ 5:30 ರ ಅವಧಿಯಲ್ಲಿ ಮುಂಬೈನ ಪ್ರಮುಖ ವಲಯಗಳಲ್ಲಿ ದಾಖಲೆಯ ಮಳೆಯಾಗಿದೆ.

  • ರಾಮ ಮಂದಿರ ಪ್ರದೇಶ: 224 ಮಿ.ಮೀ.
  • ಕೊಲಾಬಾ: 218.5 ಮಿ.ಮೀ.
  • ಸಾಂತಾಕ್ರೂಜ್: 210.6 ಮಿ.ಮೀ.

ರೈಲು ಸಂಚಾರ ವ್ಯತ್ಯಯ ಮತ್ತು ಸದ್ಯದ ಪರಿಸ್ಥಿತಿ

ಧಾರಾಕಾರ ಮಳೆಯಿಂದಾಗಿ ಮುಂಬೈನ ಲೈಫ್‌ಲೈನ್ ಎಂದೇ ಕರೆಯಲಾಗುವ ರೈಲು ಸಂಚಾರಕ್ಕೂ ತೊಂದರೆಯಾಗಿದೆ. ತುರ್ಭೆ ಮತ್ತು ಕೋಪರ್ಖೈರನೆ ನಿಲ್ದಾಣಗಳ ನಡುವೆ ರೈಲ್ವೆ ಹಳಿ ಕುಸಿತ ಉಂಟಾದ ಕಾರಣ ಕೆಲಕಾಲ ರೈಲು ಸೇವೆ ಸ್ಥಗಿತಗೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಹಳಿ ದುರಸ್ತಿಗೊಳಿಸಿ ರೈಲು ಸಂಚಾರವನ್ನು ಪುನರಾರಂಭಿಸಿದ್ದಾರೆ.

ಪ್ರಸ್ತುತ, ಜಲಾವೃತಗೊಂಡಿದ್ದ ರಸ್ತೆಗಳಲ್ಲಿ ನೀರು ಇಳಿಯುತ್ತಿದ್ದು, ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮುಂಬರುವ ದಿನಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮಹಾನಗರ ಪಾಲಿಕೆ (BMC) ಮತ್ತು ವಿಪತ್ತು ನಿರ್ವಹಣಾ ತಂಡಗಳು ಕಟ್ಟೆಚ್ಚರ ವಹಿಸಿವೆ.

Must Read