June 26, 2026
Friday, June 26, 2026
spot_img

ಸ್ಕ್ರ್ಯಾಪ್ ಆಗಬೇಕಿದ್ದ ಬ್ರಿಟಿಷ್ ವಿಮಾನಗಳ ಮೇಲೆ ಭಾರತದ ಕಣ್ಣು: ಜಾಗ್ವಾರ್ ಸ್ಕ್ವಾಡ್ರನ್ ಉಳಿಸಲು ರಣತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟನ್‌ನಲ್ಲಿ ಹರಾಜಾಗಿ ಗುಜರಿ ಸೇರಬೇಕಿದ್ದ ರಾಯಲ್ ಏರ್‌ಫೋರ್ಸ್‌ನ 9 ನಿವೃತ್ತ ಜಾಗ್ವಾರ್ ಯುದ್ಧವಿಮಾನಗಳನ್ನು ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ. ಮೇಲ್ನೋಟಕ್ಕೆ ಇದು ಹಳೆಯ ವಿಮಾನಗಳ ಖರೀದಿ ಎನಿಸಿದರೂ, ಇದರ ಹಿಂದೆ ಭಾರತೀಯ ವಾಯುಪಡೆಯ (IAF) ಬಲವಾದ ರಕ್ಷಣಾ ತಂತ್ರಗಾರಿಕೆ ಅಡಗಿದೆ. ಈ ವಿಮಾನಗಳನ್ನು ಮತ್ತೆ ಯುದ್ಧರಂಗಕ್ಕೆ ಇಳಿಸುವುದು ಭಾರತದ ಉದ್ದೇಶವಲ್ಲ; ಬದಲಿಗೆ, ಪ್ರಸ್ತುತ ವಾಯುಪಡೆಯಲ್ಲಿ ಸಕ್ರಿಯವಾಗಿರುವ 120 ಜಾಗ್ವಾರ್ (ಶಂಶೇರ್) ವಿಮಾನಗಳ ಜೀವಿತಾವಧಿ ವಿಸ್ತರಿಸುವುದು ಇದರ ಮುಖ್ಯ ಗುರಿಯಾಗಿದೆ.

ಬಿಡಿಭಾಗಗಳ ಕೊರತೆಗೆ ಮಾಸ್ಟರ್ ಪ್ಲಾನ್

ಜಾಗತಿಕವಾಗಿ ಜಾಗ್ವಾರ್ ವಿಮಾನಗಳ ಉತ್ಪಾದನೆ ಸಂಪೂರ್ಣ ನಿಂತುಹೋಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇಂಜಿನ್, ಏವಿಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್‌ನಂತಹ ಪ್ರಮುಖ ಬಿಡಿಭಾಗಗಳು ಸಿಗುತ್ತಿಲ್ಲ. ಸದ್ಯ ಜಗತ್ತಿನ ಏಕೈಕ ಜಾಗ್ವಾರ್ ಆಪರೇಟರ್ ಆಗಿ ಉಳಿದಿರುವುದು ಭಾರತ ಮಾತ್ರ. ಬ್ರಿಟನ್‌ನ ಈ 9 ವಿಮಾನಗಳನ್ನು ಭಾರತಕ್ಕೆ ತಂದು, ಅವುಗಳ ಬಿಡಿಭಾಗಗಳನ್ನು ಬಿಚ್ಚಿ, ಐಎಎಫ್‌ನ ಸಕ್ರಿಯ 6 ಜಾಗ್ವಾರ್ ಸ್ಕ್ವಾಡ್ರನ್‌ಗಳ ದುರಸ್ತಿ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ.

ಭಾರತೀಯ ವಾಯುಪಡೆಗೆ ಇದು ಏಕೆ ‘ಸಂಜೀವಿನಿ’?

ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಯುದ್ಧವಿಮಾನಗಳ ತೀವ್ರ ಕೊರತೆಯಿದೆ. ಅಗತ್ಯವಿರುವ 42 ಸ್ಕ್ವಾಡ್ರನ್‌ಗಳ ಬದಲಿಗೆ ಸದ್ಯ ಕೇವಲ 29 ಸ್ಕ್ವಾಡ್ರನ್‌ಗಳು ಮಾತ್ರ ಸಕ್ರಿಯವಾಗಿವೆ. ಸ್ವದೇಶಿ ‘ತೇಜಸ್ ಎಂಕ್-1ಎ’ ವಿಮಾನಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿದ್ದು, ಫ್ರಾನ್ಸ್‌ನ ‘ರಫೇಲ್’ ಒಪ್ಪಂದ ಇನ್ನು ಅಂತಿಮ ಹಂತ ತಲುಪಿಲ್ಲ. ಹೊಸ ವಿಮಾನಗಳು ಬರುವವರೆಗೆ ವಾಯುಪಡೆಯ ಸಾಮರ್ಥ್ಯ ಕುಸಿಯದಂತೆ ತಡೆಯಲು ಬ್ರಿಟನ್‌ನ ಈ ನಿವೃತ್ತ ವಿಮಾನಗಳು ಭಾರತಕ್ಕೆ ‘ಸಂಜೀವಿನಿ’ಯಾಗಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !