ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲ್‌ಫಾಸ್ಟ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 34 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ. ಈ ಮೂಲಕ ಐರ್ಲೆಂಡ್ ವಿರುದ್ಧ ಭಾರತ ಮೊದಲ ಬಾರಿಗೆ ಸೋಲೊಪ್ಪಿಕೊಂಡ ಇತಿಹಾಸ ನಿರ್ಮಾಣವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಶ್ರೇಯಸ್ ಅಯ್ಯರ್ ತೀರ್ಮಾನ ಕೈಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 182 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಈ ಗುರಿ ಬೆನ್ನತ್ತಿದ ಭಾರತ 148 ರನ್‌ಗಳಿಗಷ್ಟೇ ಸೀಮಿತವಾಯಿತು.
ಬೌಲರ್‌ಗಳ ವೈಫಲ್ಯಕ್ಕೆ ಅಯ್ಯರ್ ಬೇಸರ
ಪಂದ್ಯದ ಬಳಿಕ ಮಾತನಾಡಿದ ನೂತನ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ವಿಭಾಗದ ತಪ್ಪುಗಳನ್ನು ಬಹಿರಂಗಪಡಿಸಿದರು. “ಆರಂಭದಲ್ಲಿ ಪಿಚ್‌ನಲ್ಲಿದ್ದ ಸ್ವಿಂಗ್ ಬಳಸಿ 36 ರನ್‌ಗಳಿಗೆ 3 ವಿಕೆಟ್ ಪಡೆದು ಉತ್ತಮ ಹಿಡಿತ ಸಾಧಿಸಿದ್ದೆವು. ಆದರೆ ಮಧ್ಯದ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ಬೌಲರ್‌ಗಳು ಸಂಪೂರ್ಣ ವಿಫಲರಾದರು. ಸಣ್ಣ ಬೌಂಡರಿಗಳಿದ್ದರೂ ನೇರವಾಗಿ ಶಾಟ್ ಬಾರಿಸಲು ಎದುರಾಳಿಗಳಿಗೆ ಅವಕಾಶ ನೀಡಲಾಯಿತು. ಡೆತ್ ಓವರ್‌ಗಳ ದಯನೀಯ ಪ್ರದರ್ಶನದಿಂದಾಗಿ ಐರ್ಲೆಂಡ್ 140 ರನ್ ಗಳಿಸುವ ಬದಲು 182 ರನ್ ಕಲೆಹಾಕಿತು” ಎಂದು ಅಯ್ಯರ್ ಬೇಸರ ವ್ಯಕ್ತಪಡಿಸಿದರು.
ಆಟಗಾರರಿಗೆ ಖಡಕ್ ಸಂದೇಶ
ದೀರ್ಘ ಬಿಡುವಿನ ಬಳಿಕ ಮೈದಾನಕ್ಕಿಳಿದ ಆಟಗಾರರಲ್ಲಿ ಜಡತ್ವ ಎದ್ದು ಕಾಣುತ್ತಿತ್ತು ಎಂದು ಒಪ್ಪಿಕೊಂಡ ಅಯ್ಯರ್, ತಂಡಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. “ಯಾವ ಎದುರಾಳಿಯನ್ನೂ ಹಗುರವಾಗಿ ಪರಿಗಣಿಸಬೇಡಿ. ಸುಮ್ಮನೆ ಮೈದಾನಕ್ಕೆ ಬಂದು ಗೆಲ್ಲಲು ಸಾಧ್ಯವಿಲ್ಲ, ಅದಕ್ಕಾಗಿ ಶ್ರಮಪಡಬೇಕು” ಎಂದು ಎಚ್ಚರಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



