ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸಿದ್ಧಪಡಿಸಿರುವ ವರದಿಯು ತಲ್ಲಣ ಸೃಷ್ಟಿಸಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ಆಪ್ತರೇ ಈ ಹಗರಣದ ಮುಖ್ಯ ರೂವಾರಿಗಳು ಎಂದು ವರದಿ ಹೇಳಿದೆ. ಇವರ ಶಿಫಾರಸಿನ ಮೇರೆಗೆ ಯಾವುದೇ ಹಿನ್ನೆಲೆ ತಪಾಸಣೆ ಇಲ್ಲದೆ ನೇಮಕಗೊಂಡಿದ್ದ 8 ಮಂದಿ ಆರೋಪಿಗಳನ್ನು ಸದ್ಯ ಬಂಧಿಸಲಾಗಿದೆ.
40 ದಿನಗಳಲ್ಲಿ 70 ಬಾರಿ ಲೂಟಿ!
ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೇವಸ್ಥಾನದ ಹಣ ಎಣಿಸುವ ಸಿಬ್ಬಂದಿ ಕೇವಲ 40 ದಿನಗಳಲ್ಲಿ ಬರೋಬ್ಬರಿ 70 ಬಾರಿ ಕಾಣಿಕೆ ಹಣವನ್ನು ಕದ್ದಿರುವುದು ಪತ್ತೆಯಾಗಿದೆ. ಈ ಬಗ್ಗೆ ಈ ಹಿಂದೆಯೇ ಚಂಪತ್ ರಾಯ್ ಅವರಿಗೆ ದೂರುಗಳು ಬಂದಿದ್ದರೂ, ಅವರು ಪೊಲೀಸರಿಗೆ ದೂರು ನೀಡದೆ ನಿರ್ಲಕ್ಷಿಸಿದ್ದರು ಎಂದು ಎಸ್‌ಐಟಿ ಗಂಭೀರ ಪ್ರಶ್ನೆ ಎತ್ತಿದೆ.
ಮುಖ್ಯ ಸೂತ್ರಧಾರಿ ಟಿನ್ನು ಯಾದವ್
ಚಂಪತ್ ರಾಯ್ ಆಪ್ತ ಸಹಾಯಕ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಈ ಹಗರಣದ ಮಾಸ್ಟರ್ ಮೈಂಡ್. ಹುಂಡಿ ಕೀಲಿಗಳನ್ನು ಹೊಂದಿದ್ದ ಈತನೇ ಹಣ ಎಣಿಕೆ ಸಿಬ್ಬಂದಿ ಮತ್ತು ಪೊಲೀಸ್ ಭದ್ರತೆಯನ್ನು ನಿಯೋಜಿಸುವಷ್ಟು ಪ್ರಭಾವಶಾಲಿಯಾಗಿದ್ದ.
ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಖದೀಮರು
ಆರೋಪಿಗಳಾದ ಟಿನ್ನು ಯಾದವ್, ಮನೀಶ್, ಲವ್ ಕುಶ್ ಮತ್ತು ಅನುಕಲ್ಪ್ ಹಣ ಕದಿಯುವಾಗ ಸಾಮಾನ್ಯ ಸಿಸಿಟಿವಿಗಳನ್ನು ಆಫ್ ಮಾಡುತ್ತಿದ್ದರು. ಆದರೆ, ತನಿಖಾಧಿಕಾರಿಗಳು ರಹಸ್ಯವಾಗಿ ಅಳವಡಿಸಿದ್ದ ‘ಗುಪ್ತ ಕಣ್ಗಾವಲು ಕ್ಯಾಮೆರಾ’ ಬಗ್ಗೆ ಇವರಿಗೆ ತಿಳಿದಿರಲಿಲ್ಲ. ಇದರಲ್ಲಿ ಕಳ್ಳತನದ ದೃಶ್ಯಗಳು ಡಿಜಿಟಲ್ ಸಾಕ್ಷಿಯಾಗಿ ಸೆರೆಯಾಗಿದ್ದು, ಇಡೀ ಗ್ಯಾಂಗ್ ಜೈಲು ಪಾಲಾಗಲು ಕಾರಣವಾಗಿದೆ.



