June 27, 2026
Saturday, June 27, 2026
spot_img

ತುಮಕೂರು ಹೆದ್ದಾರಿಯಲ್ಲಿ ಭೀಕರ ದುರಂತ: ಚಲಿಸುತ್ತಿದ್ದ ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹ*ತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೀತಿಯ ನಿರಾಕರಣೆ ಹಿನ್ನೆಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಉತ್ತರ ಕನ್ನಡದ ಅಂಕೋಲಕ್ಕೆ ತೆರಳುತ್ತಿದ್ದ ವೇಳೆ ಪ್ರೇಮಿಗಳ ನಡುವೆ ಗಲಾಟೆ ಭುಗಿಲೆದ್ದಿದೆ. ಈ ವೇಳೆ ಯುವಕ ಮೊದಲೇ ಯೋಜಿಸಿದಂತೆ ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಹಿನ್ನೆಲೆ:

ಆತ್ಮಹತ್ಯೆಗೆ ಶರಣಾದ ಯುವಕನನ್ನು ಅಂಕೋಲ ಮೂಲದ ನಾಗೇಂದ್ರ (30) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ರಮ್ಯಾ ಉಲ್ಲಾಸ್ (23) ಎಂದು ಗುರುತಿಸಲಾಗಿದ್ದು, ಈಕೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಒಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ನಾಗೇಂದ್ರ ಡೆಲಿವರಿ ಬಾಯ್ ಆಗಿದ್ದ. ಇಬ್ಬರು ಕಳೆದ ಏಳೆಂಟು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ.

ಕಾರಿನೊಳಗೆ ಬಾಂಬ್ ಸ್ಫೋಟ

ಬೆಂಗಳೂರಿನಿಂದ ಕ್ಯಾಬ್ ಮಾಡಿಕೊಂಡು ಹೊರಟಿದ್ದ ಇವರ ನಡುವೆ ಶಿರಾ ತಾಲೂಕಿನ ಜೋಗಿಹಳ್ಳಿ ತಲುಪುತ್ತಿದ್ದಂತೆ ಮದುವೆ ವಿಚಾರವಾಗಿ ದೊಡ್ಡ ಜಗಳ ನಡೆದಿದೆ. ಈ ವೇಳೆ ನಾಗೇಂದ್ರ ತಕ್ಷಣವೇ ರಮ್ಯಾ ತಲೆ ಮತ್ತು ದೇಹಕ್ಕೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದ ರಕ್ತದ ಮಡುವಿನಲ್ಲಿದ್ದ ರಮ್ಯಾ, ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆದು ರಸ್ತೆಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಕಾರು ಚಾಲಕ ತಕ್ಷಣವೇ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾನೆ.

ಇದೇ ಸಮಯವನ್ನು ಬಳಸಿಕೊಂಡ ನಾಗೇಂದ್ರ ಕಾರಿನ ಎಲ್ಲಾ ಡೋರ್‌ಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾನೆ. ತಾನು ಮೊದಲೇ ಪ್ಲಾನ್ ಮಾಡಿ ತಂದಿದ್ದ ಪೆಟ್ರೋಲ್ ಬಾಂಬ್ ಅನ್ನು ಕಾರಿನೊಳಗೆ ಸಿಡಿಸಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ನಾಗೇಂದ್ರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ.

ಇದನ್ನೂ ಓದಿ:

ಸ್ಥಳಕ್ಕೆ ಎಸ್ಪಿ ಭೇಟಿ – ತನಿಖೆ ಚುರುಕು

ಘಟನೆಯ ಭೀಕರತೆ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಮ್ಯಾ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸುಟ್ಟು ಹೋದ ಕಾರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !