ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಸೆಶೆಲ್ಸ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವವಾದ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಈ ಗೌರವವನ್ನು ಅಧಿಕೃತ ಸಮಾರಂಭದಲ್ಲಿ ಪ್ರಧಾನಿಗೆ ನೀಡಿದರು.
ಐತಿಹಾಸಿಕ ಗೌರವ
ಈ ಪ್ರಶಸ್ತಿಯನ್ನು ಸೆಶೆಲ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಿ ಗಣ್ಯರೊಬ್ಬರಿಗೆ ನೀಡಲಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ವಿದೇಶಿ ರಾಷ್ಟ್ರಗಳಿಂದ ಪಡೆದಿರುವ ಅಂತಾರಾಷ್ಟ್ರೀಯ ಗೌರವಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಭಾರತದ ನೆರವು ಮುಂದುವರಿಕೆ
ಭೇಟಿಯ ವೇಳೆ ಭಾರತದಲ್ಲಿ ನಿರ್ಮಿಸಲಾದ ವೇಗದ ಗಸ್ತು ನೌಕೆಯನ್ನು ಪ್ರಧಾನಿ ಮೋದಿ ಸೆಶೆಲ್ಸ್ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಿದರು. ಸಮುದ್ರ ಭದ್ರತೆ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಸಹಕಾರ ಮತ್ತಷ್ಟು ಬಲವಾಗಲಿದೆ ಎಂದು ತಿಳಿಸಲಾಯಿತು.
ಇದನ್ನೂ ಓದಿ:
ಹವಾಮಾನ ಹೋರಾಟಕ್ಕೆ ಸಮರ್ಪಣೆ
ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ, ಈ ಗೌರವವನ್ನು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುತ್ತಿರುವ ಎಲ್ಲ ರಾಷ್ಟ್ರಗಳಿಗೆ ಸಮರ್ಪಿಸಿದರು. ಪರಿಸರ ಸಂರಕ್ಷಣೆ ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ದ್ವಿಪಕ್ಷೀಯ ಮಾತುಕತೆ
ಭಾರತ-ಸೆಶೆಲ್ಸ್ ನಡುವಿನ ವ್ಯಾಪಾರ, ಭದ್ರತೆ, ಅಭಿವೃದ್ಧಿ ಹಾಗೂ ಪ್ರಾದೇಶಿಕ ಸಹಕಾರದ ಕುರಿತು ಉಭಯ ನಾಯಕರು ಸಮಗ್ರ ಚರ್ಚೆ ನಡೆಸಿದರು. ಮೂರು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸೋಮವಾರ ನಡೆಯಲಿರುವ ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಭಾಷಣ ಮಾಡುವ ಜೊತೆಗೆ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ.



