ಹೊಸದಿಗಂತ ವರದಿ ಬೀದರ್:
ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರಾ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ರಾಜ್ಯಾದ್ಯಂತ ‘ಕಾಂಗ್ರೆಸ್ ಹಟಾವೊ, ತಾಂಡಾ ಬಚಾವ್’ ಅಭಿಯಾನ ಹಮ್ಮಿಕೊಳ್ಳುವುದಾಗಿ ಘೋಷಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಹೆಚ್ಚಿಸುವ ಪ್ರಸ್ತಾವನೆ ಇದ್ದರೂ, ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಬಳಿಕ 59 ಜಾತಿಗಳನ್ನು ಸೇರಿಸಿ ಒಳ ಮೀಸಲಾತಿ ಹಂಚಿಕೆ ಮಾಡಿರುವುದರಿಂದ ಬಂಜಾರಾ ಸೇರಿದಂತೆ ಹಲವು ಸಮಾಜಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:
ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಸರ್ಕಾರ ಕೂಡಲೇ ಈ ಅನ್ಯಾಯ ಸರಿಪಡಿಸದಿದ್ದರೆ ರಸ್ತೆ ತಡೆ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಹೆದ್ದಾರಿ ಬಂದ್ ಸೇರಿದಂತೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಡಾ. ಉಮೇಶ್ ಜಾಧವ, ನಾಗಮೋಹನದಾಸ್ ವರದಿ ವೈಜ್ಞಾನಿಕವಾಗಿಲ್ಲ ಎಂದು ಟೀಕಿಸಿ, ಜನಗಣತಿ ಪೂರ್ಣಗೊಂಡ ಬಳಿಕವೇ ಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಾಗೂ ಬಂಜಾರಾ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.



