September 4, 2026
Friday, September 4, 2026
spot_img

ಗ್ಯಾಸ್ ಗ್ರಾಹಕರಿಗೆ ಭರ್ಜರಿ ಗಿಫ್ಟ್: ವಾಣಿಜ್ಯ ಸಿಲಿಂಡರ್ ಬೆಲೆ ಭಾರಿ ಇಳಿಕೆ, ಇಂದಿನ ಹೊಸ ದರ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಗಗನಕ್ಕೇರುತ್ತಿದ್ದ ಇಂಧನ ದರದಿಂದ ಕಂಗಾಲಾಗಿದ್ದ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರಿಗೆ ಇಂದು (ಜುಲೈ 1) ತೈಲ ಕಂಪನಿಗಳು ಭರ್ಜರಿ ಗುಡ್ ನ್ಯೂಸ್ ನೀಡಿವೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 183.50 ರೂ ಗಳನ್ನು ಕಡಿತಗೊಳಿಸಲಾಗಿದೆ.

ಜುಲೈ ಮೊದಲ ದಿನವೇ ವಾಣಿಜ್ಯ ಸಿಲಿಂಡರ್ ಬೆಲೆ 183.50 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಜೂನ್‌ನಲ್ಲಿ 3,198 ರೂ. ತಲುಪಿದ್ದ ವಾಣಿಜ್ಯ ಸಿಲಿಂಡರ್ ಬೆಲೆ ಸದ್ಯ 3,021 ರೂ.ಗೆ ಇಳಿಕೆಯಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ತಿಳಿಸಿದೆ. ಇನ್ನು ಮನೆಗಳಲ್ಲಿ ಬಳಸುವ 14.2 ಕೆಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ.

ತೈಲ ಬಿಕ್ಕಟ್ಟಿಗೆ ಕಾರಣವೇನು?

ಕಳೆದ ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯು ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ದಾಳಿಯ ಬೆನ್ನಲ್ಲೇ, ಇರಾನ್ ತನ್ನ ನಿಯಂತ್ರಣದಲ್ಲಿರುವ ಪ್ರಮುಖ ‘ಸ್ಟ್ರೈಟ್ ಆಫ್ ಹಾರ್ಮುಜ್’ ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲ ಸಾಗಿಸುವ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಈ ಪೂರೈಕೆ ವ್ಯತ್ಯಯದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಸತತವಾಗಿ ಏರಿಕೆ ಕಂಡಿದ್ದವು.

ನಾಲ್ಕು ಬಾರಿ ಹೆಚ್ಚಾಗಿದ್ದ ವಾಣಿಜ್ಯ ಸಿಲಿಂಡರ್ ಬೆಲೆ

ಹಾರ್ಮುಜ್ ಜಲಸಂಧಿಯ ಅಡಚಣೆಯ ನಂತರ ಭಾರತದಲ್ಲಿ ಭಾರಿ ನಷ್ಟದ ಹಿನ್ನೆಲೆಯನ್ನು ಉಲ್ಲೇಖಿಸಿ ತೈಲ ಕಂಪನಿಗಳು ಒಟ್ಟು ನಾಲ್ಕು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದವು. ಹೀಗೆ ಒಟ್ಟು ನಾಲ್ಕು ಕಂತುಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 1,374.50 ರೂ.ನಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಇದರಿಂದಾಗಿ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಇದನ್ನೂ ಓದಿ:

 ಗೃಹಬಳಕೆ ಸಿಲಿಂಡರ್ ಮೇಲೂ ಬಿದ್ದಿತ್ತು ಯುದ್ಧದ ಬಿಸಿ

ಕೇವಲ ವಾಣಿಜ್ಯ ಸಿಲಿಂಡರ್ ಮಾತ್ರವಲ್ಲದೆ, ಸಾಮಾನ್ಯ ಜನರು ಮನೆಗಳಲ್ಲಿ ಬಳಸುವ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೂಡ ಎರಡು ಕಂತುಗಳಲ್ಲಿ ಒಟ್ಟು 89 ರೂ. ನಷ್ಟು ಹೆಚ್ಚಿಸಲಾಗಿತ್ತು. ತೈಲ ಕಂಪನಿಗಳು ಮೊದಲು ಮಾರ್ಚ್‌ನಲ್ಲಿ 60 ರೂ. ಮತ್ತು ನಂತರ ಜೂನ್‌ನಲ್ಲಿ 29 ರೂ.ನಷ್ಟು ಬೆಲೆಯನ್ನು ಏರಿಸಿದ್ದವು. ಸದ್ಯ ಇಂದಿನ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯು ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !