October 20, 2026
Tuesday, October 20, 2026
spot_img

ದಸರಾ ಸಂಭ್ರಮದ ಮಧ್ಯೆ ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ: ರಾಜ್ಯದಲ್ಲಿ ಮುಂದಿನ ದಿನಗಳ ಪರಿಸ್ಥಿತಿ ಹೇಗಿರಲಿದೆ?‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿರುವ ಬೆನ್ನಲ್ಲೇ, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮತ್ತೊಂದು ಮಹತ್ವದ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಹಾಗೂ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಹವಾಮಾನ ಪರಿಸ್ಥಿತಿ ಮತ್ತು ಜನರ ಬದುಕಿನ ಮುಂದಿನ ದಿನಗಳ ಬಗ್ಗೆ ತಮ್ಮ ಮುನ್ಸೂಚನೆಗಳನ್ನು ಹಂಚಿಕೊಂಡಿದ್ದಾರೆ.

ಹಿಂಗಾರು ಮಳೆಯಿಂದ ಜನರಿಗೆ ನೆಮ್ಮದಿ

ಈ ಹಿಂದೆ ಮುಂಗಾರು ಮಳೆ ಕೈಕೊಡುವ ಬಗ್ಗೆ, ನೀರಿಗಾಗಿ ಎದುರಾಗುವ ಹಾಹಾಕಾರ ಮತ್ತು ಭೂಕಂಪಗಳ ಕುರಿತು ತಾವು ನುಡಿದಿದ್ದ ಭವಿಷ್ಯವನ್ನು ಸ್ವಾಮೀಜಿ ನೆನಪಿಸಿಕೊಂಡರು. ಆದರೆ ಸದ್ಯದ ಪರಿಸ್ಥಿತಿಯ ಬಗ್ಗೆ ಧನಾತ್ಮಕ ನುಡಿಗಳನ್ನಾಡಿರುವ ಅವರು, “ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಚೆನ್ನಾಗಿ ಆಗಲಿದೆ. ಇದರಿಂದಾಗಿ ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ, ಜಲಚರಗಳಿಗೂ ಒಳ್ಳೆಯದಾಗಲಿದೆ” ಎಂದು ಆಶಾದಾಯಕ ನುಡಿಗಳನ್ನು ಹೇಳಿದ್ದಾರೆ.

ರಾಜಕೀಯ ಬದಲಾವಣೆ ಬಗ್ಗೆ ಮೌನ

ಇತ್ತೀಚಿನ ದಿನಗಳಲ್ಲಿ ತೀವ್ರ ಚರ್ಚೆಯಲ್ಲಿರುವ ರಾಜ್ಯ ರಾಜಕೀಯದ ಏರುಪೇರುಗಳು ಮತ್ತು ಬದಲಾವಣೆಗಳ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಸ್ವಾಮೀಜಿ ನೇರ ಉತ್ತರ ನೀಡದೆ ಜಾಣ್ಮೆಯ ಮೌನ ವಹಿಸಿದರು. “ರಾಜಕೀಯ ಬದಲಾವಣೆಯ ವಿಚಾರ ನಮಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ, ಯಾರೂ ರೋಗ ರುಜಿನಗಳಿಗೆ ತುತ್ತಾಗಬಾರದು” ಎಂದು ಹಾರೈಸಿದರು.

ಇದನ್ನೂ ಓದಿ:

ಧಾರವಾಡ ದಸರಾಕ್ಕೆ ಶ್ರೀಗಳ ಶ್ಲಾಘನೆ

ಧಾರವಾಡದಲ್ಲಿ ಉತ್ತರ ಕರ್ನಾಟಕದ ಭಾಗವಾಗಿ ನಡೆಯುತ್ತಿರುವ ಜಂಬೂ ಸವಾರಿಯು ಅಖಂಡ ಕರ್ನಾಟಕದ ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿದೆ ಎಂದು ಶ್ರೀಗಳು ಬಣ್ಣಿಸಿದರು. “ಮೈಸೂರಿನಲ್ಲಿ ಒಂದಾದರೆ ಇಡೀ ಉತ್ತರ ಕರ್ನಾಟಕಕ್ಕೆ ಈ ದಸರಾ ಒಂದಾಗಿದೆ. ಇದು ಏಕತಾ ಮನೋಭಾವನೆಯ ಒಂದು ಸಂದೇಶ. ಮನುಷ್ಯ ದುರ್ನಡೆಗಳನ್ನು ಬಿಟ್ಟು ಆದರ್ಶದಿಂದ ಬಾಳಲು ಇಂತಹ ಕಾರ್ಯಕ್ರಮಗಳು ಮುಂದೆಯೂ ನಡೆಯಬೇಕು” ಎಂದು ಶ್ಲಾಘಿಸಿದರು.

Must Read