July 1, 2026
Wednesday, July 1, 2026
spot_img

ಹಿರಿಯ ಚಲನಚಿತ್ರ ನಿರ್ದೇಶಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ವಿಜಯ ಮೆಹ್ತಾ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ರಂಗಭೂಮಿ ಮತ್ತು ಪ್ರಾಯೋಗಿಕ ಚಿತ್ರರಂಗದ ಸುವರ್ಣ ಯುಗದ ಕೊಂಡಿಯೊಂದು ಕಳಚಿದೆ. ಖ್ಯಾತ ಹಿರಿಯ ನಿರ್ದೇಶಕಿ, ಸಂಘಟಕಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ವಿಜಯ ಮೆಹ್ತಾ ನಿನ್ನೆ ರಾತ್ರಿ ದಕ್ಷಿಣ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ರಂಗಭೂಮಿ ವಲಯದಲ್ಲಿ ಪ್ರೀತಿಯಿಂದ “ಬಾಯಿ” ಎಂದೇ ಕರೆಯಲ್ಪಡುತ್ತಿದ್ದ ಅವರಿಗೆ 91 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ರಂಗಭೂಮಿಯ ತಾಯಿ ಬೇರು:

1960ರ ದಶಕದಲ್ಲಿ ಮುಂಬೈನಲ್ಲಿ ‘ರಂಗಾಯನ್’ ಎಂಬ ಪ್ರಾಯೋಗಿಕ ರಂಗತಂಡವನ್ನು ಕಟ್ಟಿ ಆಧುನಿಕ ಮರಾಠಿ ರಂಗಭೂಮಿಗೆ ಹೊಸ ರೂಪ ನೀಡಿದ್ದರು. 1986ರ ಪ್ರಸಿದ್ಧ ‘ರಾವ್ ಸಾಹೇಬ್’ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.  ನಾನಾ ಪಾಟೇಕರ್, ಅನುಪಮ್ ಖೇರ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಮಹಾನ್ ನಟರಿಗೆ ಇವರೇ ನಟನೆಯ ಮೊದಲ ಗುರು ಮತ್ತು ಮಾರ್ಗದರ್ಶಕರಾಗಿದ್ದರು.

ಸಿನಿಮಾ ಮತ್ತು ನಾಟಕ ರಂಗಕ್ಕೆ ಅಪಾರ ಕೊಡುಗೆ

ವಿಜಯ ಮೆಹ್ತಾ ಕೇವಲ ಮರಾಠಿ ಮಾತ್ರವಲ್ಲದೆ ಒಟ್ಟಾರೆ ಭಾರತೀಯ ಕಲಾ ರಂಗಕ್ಕೆ ದಿಕ್ಕು ದೆಸೆ ತೋರಿಸಿದವರು. ಗಿರೀಶ್ ಕಾರ್ನಾಡ್ ‘ಹಯವದನ’, ವಿಜಯ್ ತೆಂಡೂಲ್ಕರ್ ‘ಸಖಾರಾಮ್ ಬೈಂಡರ್’ ನಾಟಕಗಳನ್ನು ರಂಗದ ಮೇಲೆ ತಂದ ಕೀರ್ತಿ ಇವರಿಗಿದೆ. ಚಿತ್ರರಂಗದಲ್ಲಿ ಇವರು ನಿರ್ದೇಶಿಸಿದ ‘ಪೆಸ್ಟೊಂಜಿ’ ಮತ್ತು ‘ರಾವ್ ಸಾಹೇಬ್’ ಚಲನಚಿತ್ರಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದವು. ಕಲೆಗೆ ನೀಡಿದ ಅಪ್ರತಿಮ ಕೊಡುಗೆಗಾಗಿ ಇವರಿಗೆ 1975ರಲ್ಲೇ ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.

ಇದನ್ನೂ ಓದಿ;

ಪ್ರಧಾನಿ ನರೇಂದ್ರ ಮೋದಿ ಸಂತಾಪ

ವಿಜಯ ಮೆಹ್ತಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಕಂಬನಿ ಮಿಡಿದಿದ್ದಾರೆ. “ವಿಜಯ ಮೆಹ್ತಾ ನಿಧನ ತೀವ್ರ ಆಘಾತ ತಂದಿದೆ. ಭಾರತೀಯ ಸಂಸ್ಕೃತಿ ಮತ್ತು ಚಲನಚಿತ್ರ ರಂಗದ ಧ್ರುವತಾರೆಯಾಗಿ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದ ಅವರ ಸೃಜನಶೀಲತೆ ತಲೆಮಾರುಗಳ ನಟ ಮತ್ತು ನಿರ್ದೇಶಕರಿಗೆ ಸ್ಫೂರ್ತಿಯಾಗಿದೆ,” ಎಂದು ಪ್ರಧಾನಿ ಸ್ಮರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !