ಹೊಸದಿಗಂತ ವರದಿ ಅಂಕೋಲಾ:
ತುಮಕೂರಿನ ಶಿರಾ ಬಳಿ ಅಂಕೋಲಾದ ಯುವಕ ಕಾರಿನಲ್ಲಿ ನಾಡಬಾಂಬ್ ಸ್ಪೋಟಿಸಿ ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ನಾಡಬಾಂಬ್ ಹೊಂದಿರುವ ಮತ್ತು ಪೂರೈಸಿದ ಆರೋಪದ ಮೇಲೆ ಮೂವರು ಸ್ಥಳೀಯರನ್ನು ಬಂಧಿಸಿದ್ದಾರೆ.
ಮೀನು ಹಿಡಿಯಲು ನೀರಿನಲ್ಲಿ ಸ್ಪೋಟಿಸಲು ಬಳಕೆ ಮಾಡುವ ಮೂರು ಸಜೀವ ಬಾಂಬುಗಳನ್ನುಆರೋಪಿತರು ಅಗಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಳ್ಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದ್ದು, ಧಾರವಾಡದಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಅವುಗಳನ್ನು ಸುರಕ್ಷಿತ ರವಾನೆಗೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಮೃತ ನಾಗೇಂದ್ರನ ಸಂಬಂಧಿಗಳಾದ ನಾರಾಯಣ ಗೌಡ, ನಾಗರಾಜ ಗೌಡ ಶಿರಗುಂಜಿಯ ಸಂದೀಪ ಎನ್ನುವವರರನ್ನು ಪೊಲೀಸರು ಬಂಧಿಸಿದ್ದು ಹೊನ್ನಾವರದ ಚಂದಾವರದ ವ್ಯಕ್ತಿಯೋರ್ವನನ್ನು ಬಂಧಿಸುವ ಸಾಧ್ಯತೆ ಇದೆ.
ಪ್ರಕರಣದ ವಿಚಾರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆರೋಪಿತರು ನಾಡಬಾಂಬುಗಳನ್ನು ಸಮೀಪದ ಅರಣ್ಯ ಪ್ರದೇಶದಲ್ಲಿ ಬಚ್ಚಿಡುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಬಹಳ ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಹರಿಯುವ ನದಿಯಲ್ಲಿ ನಾಡಬಾಂಬ್ ಸ್ಪೋಟಿಸಿ ಮೀನು ಹಿಡಿಯುವ ಕೃತ್ಯ ನಿರಂತರವಾಗಿ ನಡೆಯುತಿತ್ತು ಎಂಬ ಮಾತುಗಳು ಕೇಳಿ ಬರತೊಡಗಿದೆ.
ಇದನ್ನೂ ಓದಿ:
ಹೆಬ್ಬುಳದಲ್ಲಿ ಚಿಕ್ಕ ಚಹಾ ತಿಂಡಿ ಹಾಕಿಕೊಂಡಿದ್ದ ಮೃತ ನಾಗೇಂದ್ರ ಗೌಡ ಸಹ ಆಗಾಗ ಮೀನು ಹಿಡಿಯಲು ಹೋಗುತ್ತಿದ್ದು ನಾಡ ಬಾಂಬ್ ಬಳಕೆಯ ಕುರಿತಂತೆ ತಿಳಿದುಕೊಂಡಿದ್ದ ಎನ್ನಲಾಗುತ್ತಿದ್ದು, ಹಾಗಾಗಿಯೇ ಸುಲಭವಾಗಿ ನಾಡ ಬಾಂಬುಗಳನ್ನು ಪಡೆದುಕೊಂಡು ಬೆಂಗಳೂರಿಗೆ ತೆರಳಿ ತನ್ನಿಂದ ದೂರವಾಗುತ್ತಿರುವ ಪ್ರೇಯಸಿಯ ಹತ್ಯೆಗೆ ಯೋಜನೆ ರೂಪಿಸಿದ್ದನೇ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಸದ್ಯ ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



